
ನವದೆಹಲಿ, ಆ.15- ತೀವ್ರ ಕುತೂಹಲ ಕೆರಳಿಸಿರುವ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಇಂದಿನ ದಿನದ (ಎಂಟನೆ ದಿನ) ವಿಚಾರಣೆ ನ್ಯಾಯಾಧೀಶರ ಅಲಭ್ಯದಿಂದಾಗಿ ನಡೆಯಲಿಲ್ಲ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಎಸ್.ಎ.ಬೊಬ್ಡೆ ಅನುಪಸ್ಥಿತಿ ಕಾರಣ ಇಂದಿನ ವಿಚಾರಣಾ ಕಲಾಪವನ್ನು ನಡೆಸಲು ಸಾಧ್ಯವಾಗಲಿಲ್ಲ.
ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಪಕ್ಷಗಾರರಲ್ಲಿ ಒಬ್ಬರಾದ ರಾಮಲಲ್ಲಾ ವಿರಾಜ್ಮಾನ್ ಪರ ವಕೀಲರು ಸುಪ್ರೀಂಕೋರ್ಟ್ನಲ್ಲಿ ಇಂದು ಕೂದ ತಮ್ಮ ವಾದ ಮತ್ತು ಸಮರ್ಥನೆಯನ್ನು ಮುಂದುವರಿಸಬೇಕಿತ್ತು.
ರಾಮಲಲ್ಲಾ ವಿರಾಜ್ಮಾನ್ ಪರ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್, ಆಯೋಧ್ಯೆಯೇ ರಾಮನ ಜನ್ಮಸ್ಥಳ ಮತ್ತು ಈ ಸ್ಥಳದಲ್ಲಿ ರಾಮ ಮಂದಿರ ಇತ್ತು ಎಂಬ ತಮ್ಮ ವಾದ ಸಮರ್ಥನೆಯನ್ನು ಈಗಾಗಲೇ ಮಂಡಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೊಕ್ ಭೂಷಣ್ ಮತ್ತು ಎಸ್.ಎ.ನಜೀರ್ ಅವರನ್ನೂ ಒಳಗೊಂಡ ಪಂಚ ನ್ಯಾಯಪೀಠ ಆಗಸ್ಟ್ 6ರಿಂದ ವಿಚಾರಣೆ ನಡೆಸುತ್ತಿದೆ.
ಸುಪ್ರೀಕೋರ್ಟ್ ನಿವೃತ್ತ ನ್ಯಾಯಮೂರ್ತಿ ಖಲಿಫುಲ್ಲಾ ನೇತೃತ್ವದ ತ್ರಿಸದಸ್ಯರ ಮಧ್ಯಸ್ಥಿಕೆ ಸಮಿತಿಯ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿವಾದದ ದಿನನಿತ್ಯದ ವಿಚಾರಣೆ ಕೈಗೆತ್ತಿಕೊಂಡಿದೆ.
ರಾಮಜನ್ಮಭೂಮಿ, ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಒಟ್ಟು 14 ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ 2.77 ಎಕರೆ ಭೂ ಪ್ರದೇಶವನ್ನು ಸುನ್ನಿ ವಕ್ಫ್ ಮಂಡಳಿ ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ ಈ ಮೂವರು ಪಕ್ಷದಾರರಿಗೆ ಸಮನಾಗಿ ಹಂಚಿಕೆ ಮಾಡಿತ್ತುಘಿ. ಆದರೆ ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತುಘಿ.
ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚಿಸಲಾಗಿದ್ದ ತ್ರಿಸದಸ್ಯ ಮಧ್ಯಸ್ಥಿಕೆ ಸಮಿತಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಸಂಧಾನ ಪ್ರಕ್ರಿಯೆ ಕೈಗೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು ಆದರೆ, ವಿವಾದ ಇತ್ಯರ್ಥ ಸಂಧಾನದಲ್ಲಿ ಸಮಿತಿ ವಿಲವಾಗಿದೆ ಎಂದು ಸುಪ್ರೀಂಕೋರ್ಟ್ ನಿರ್ಣಯಿಸಿ ದಿನನಿತ್ಯ ವಿಚಾರಣೆ ಮುಂದುವರಿಸಿದೆ.