ಬೆಂಗಳೂರು, ಆ.19- ಬಿಬಿಎಂಪಿ ಬಜೆಟ್ ತಡೆಹಿಡಿದಿರುವ ಸರ್ಕಾರದ ನಿರ್ಧಾರದ ವಿರುದ್ಧ ಪಾಲಿಕೆ ಸಭೆಯಲ್ಲಿಂದು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಆಡಳಿತಪಕ್ಷದ ನಾಯಕ ಅಬ್ದುಲ್ ವಾಜೀದ್, ಈಗಾಗಲೇ ಪಾಲಿಕೆ ಬಜೆಟ್ ಮಂಡನೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಮೇಲೆ ಪಾಲಿಕೆ ಬಜೆಟ್ ತಡೆಹಿಡಿದಿದ್ದಾರೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿವೆ. ಸರ್ಕಾರ ಏಕೆ ಬಜೆಟನ್ನು ತಡೆಹಿಡಿದಿದೆ ? ಅಂಗೀಕಾರ ಮಾಡುತ್ತಾ ?ಇಲ್ಲವಾ ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಪಕ್ಷದ ನಾಯಕ ಪದ್ಮನಾಭವರೆಡ್ಡಿ ಉತ್ತರಿಸಿ, ನೀವು 13ಸಾವಿರ ಕೋಟಿ ಬಜೆಟನ್ನು ಮಂಡಿಸಿ, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, 9 ಸಾವಿರ ಕೋಟಿಗೆ ಮಾತ್ರ ಆರ್ಥಿಕ ಇಲಾಖೆ ಅನುಮೋದನೆ ನೀಡಿತ್ತು. ಆದರೆ, ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆರ್ಥಿಕ ಇಲಾಖೆ ನೀಡಿರುವ 9 ಸಾವಿರ ಕೋಟಿ ರೂ. ಅನುದಾನವನ್ನು 12,950ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದರು. ಹಾಗಾಗಿ ತಡೆಹಿಡಿಯಲಾಗಿದೆ ಎಂದರು.
ಅನುದಾನವನ್ನು ಹೆಚ್ಚಳ ಮಾಡಿಕೊಳ್ಳುವ ಅಧಿಕಾರ ನಗರಾಭಿವೃದ್ಧಿ ಇಲಾಖೆಗೆ ಇಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಬಜೆಟನ್ನು ತಡೆಹಿಡಿದಿದ್ದಾರೆ ಎಂದಾಗ ಕಾಂಗ್ರೆಸ್ನ ಶಿವರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಆಡಳಿತಾವಧಿ ಮುಗಿಯುತ್ತಾ ಬಂದಿದೆ. ಬಿಜೆಪಿ ಮೇಲೆ ನಂಬಿಕೆ ಇಟ್ಟು ನಗರದಿಂದ ನಾಲ್ವರು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಆದರೆ ನೀವೇನು ಮಾಡುತ್ತಿದ್ದೀರಿ ಎಂದಾಗ ಶಿವರಾಜ್ ಹಾಗೂ ಪದ್ಮನಾಭರೆಡ್ಡಿ ನಡುವೆ ಮಾತಿನ ಚಕಮಕಿ ನಡೆಯಿತು.
ಶಿವರಾಜ್ಗೆ ಕಾಂಗ್ರೆಸ್ನ ಸದಸ್ಯರು ಬೆಂಬಲಕ್ಕೆ ನಿಂತರೆ, ಪದ್ಮನಾಭರೆಡ್ಡಿ ಬಿಜೆಪಿ ಸದಸ್ಯರು ಬೆಂಬಲಕ್ಕೆ ನಿಂತರು. ಹೀಗಾಗಿ ಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ಆಗ ಆಯುಕ್ತರು ಗಲಾಟೆಯನ್ನು ಬಗೆಹರಿಸಿ ಪದ್ಮನಾಭರೆಡ್ಡಿ ಅವರಿಗೆ ಮಾತನಾಡಲು ಅನುಮತಿ ಕೊಟ್ಟರು.
ಕೆಲ ತಾಂತ್ರಿಕ ತೊಂದರೆಯಿಂದ ಬಜೆಟನ್ನು ತಡೆಹಿಡಿಯಲಾಗಿದೆ. ನಾಲ್ಕೈದು ದಿನಗಳೊಳಗೆ ಅನುಮೋದನೆ ನೀಡಲಾಗುವುದು ಎಂದು ಪದ್ಮನಾಭರೆಡ್ಡಿ ಸಭೆಗೆ ಉತ್ತರಿಸಿದರು.