ಬೆಂಗಳೂರು: ನಗರದಲ್ಲಿ ಮತ್ತೊಂದು ಬೃಹತ್ ಹಗರಣ ಬಯಲಿಗೆ ಬಂದಿದೆ. ವೈಟ್ ಟ್ಯಾಪಿಂಗ್ ಕಾಮಗಾರಿಯಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಪ್ರಕರಣದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರ ಹೆಸರುಗಳು ಕೇಳಿ ಬಂದಿವೆ.
ವೈಟ್ ಟ್ಯಾಪಿಂಗ್ನಲ್ಲಿ ಅಕ್ರಮ ನಡೆದಿರುವ ಬಗ್ಗೆ 2017ರಲ್ಲಿ ಬಿಜೆಪಿ ಮುಖಂಡ ಎನ್ಆರ್ ರಮೇಶ್ ತನಿಖಾ ಸಂಸ್ಥೆಗೆ ದೂರು ನೀಡಿದ್ದರು. ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಹಾಗೂ ಎಸಿಎಂಎಂ ಕೋರ್ಟ್ನಲ್ಲಿ ಅವರು ಖಾಸಗಿ ದೂರು ದಾಖಲಿಸಿದ್ದರು.
ವೈಟ್ ಟ್ಯಾಪಿಂಗ್ ಮಾಡಲು ಪ್ರತಿ ಕಿಲೋ ಮೀಟರ್ಗೆ ತಗಲುವ ವೆಚ್ಚ 3 ಕೋಟಿ ರೂಪಾಯಿ. ಆದರೆ, ಪ್ರತಿ ಕಿ.ಮೀಗೆ 11 ಕೋಟಿ ಬಿಲ್ ಮಾಡಲಾಗಿದೆ ಎಂಬುದು ರಮೇಶ್ ಆರೋಪ. ಅಲ್ಲದೆ ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಜಿ ಪರಮೇಶ್ವರ್ ಹಾಗೂ ಕೆ.ಜೆ.ಜಾರ್ಜ್ ದೊಡ್ಡ ಮೊತ್ತದಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಗುರುವಾರ ಮಹತ್ವದ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಎರಡು ಹಂತದ ವೈಟ್ ಟ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಹಾಗಾಗಿ 1,490 ಕೋಟಿ ರೂ. ವೆಚ್ಚದಲ್ಲಿ ನಡೆಯಬೇಕಿದ್ದ ಮೂರನೇ ಹಂತದ ವೈಟ್ ಟ್ಯಾಪಿಂಗ್ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ ನೀಡಿದ್ದಾರೆ.
ಅಲ್ಲದೆ, ಒಂದು ಹಾಗೂ ಎರಡನೇ ಹಂತದ ಕಾಮಗಾರಿ ತನಿಖೆಗೆ ಆದೇಶಿಸಿರುವ ಬಿಎಸ್ವೈ ಆದೇಶಿಸಿದ್ದಾರೆ. ಇದರಿಂದ ಪರಮೇಶ್ವರ್ ಹಾಗೂ ಜಾರ್ಜ್ಗೆ ಹೊಸ ಸಂಕಷ್ಟ ಎದುರಾಗಿದೆ.