ಬೆಂಗಳೂರು, ಆ.18- ಪೋನ್ ಟ್ಯಾಪಿಂಗ್ ಪ್ರಕರಣ ಪಾರದರ್ಶಕವಾಗಿ ತನಿಖೆಯಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐಗೆ ನೀಡಿದ್ದಾರೆಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಬಹಳ ನುರಿತ ರಾಜಕಾರಣಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ ಎಂದರು.
ಏಕಪಾತ್ರಾಭಿನಯ ಯಾರದ್ದು, ದ್ವಿಪಾತ್ರಾಭಿನಯ ಯಾರದ್ದು, ಯಾರು ಬಣ್ಣ ಹಾಕಿಕೊಂಡಿದ್ದಾರೆ ಎಂಬುದು ಹೊರಗೆ ಬರಲಿ ಎಂದು ಹೇಳಿದರು.
ಪೋನ್ ಟ್ಯಾಪಿಂಗ್ ಪ್ರಕರಣ ತನಿಖೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ಕೂಡ ಒತ್ತಾಯಿಸಿದ್ದರು. ಇನ್ನೂ ಕೆಲ ಕಾಂಗ್ರೆಸ್ ನಾಯಕರು ಪೋನ್ ಕದ್ದಾಲಿಕೆ ಎಷ್ಟು ಸರಿ ಎಂದು ಕೇಳುತ್ತಿದ್ದರು. ಕಾಂಗ್ರೆಸ್ನಲ್ಲೇ ದ್ವಂದ್ವ ನಿಲುವಿದೆ. ಹೀಗಾಗಿ ಯಡಿಯೂರಪ್ಪನವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಮತ್ತು ಪಾರದರ್ಶಕವಾಗಿ ತನಿಖೆಯಾಗಲಿ ಎಂದು ಮನವಿ ಮಾಡಿದ್ದಾರೆ.ಸಿಬಿಐ
ತನಿಖೆಯನ್ನು ಸ್ವಾಗತಿಸಿದ ಕೇಂದ್ರ ಸಚಿವ:
ಟೆಲಿಪೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ ಎಂದು ಕೇಂದ್ರ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಪೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧವಾಗಿದ್ದು, ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ಸೇಡಿನ ರಾಜಕಾರಣದ ಪ್ರಶ್ನೆಯೇ ಇಲ್ಲ ಎಂದರು.
ಕಾಂಗ್ರೆಸ್ ನಾಯಕರು ಕೂಡ ಟೆಲಿಪೋನ್ ಕದ್ದಾಲಿಕೆ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು.ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದರು.
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಟೆಲಿಪೋನ್ ಕದ್ದಾಲಿಕೆ ಮಹಾ ಅಪರಾಧವಾಗಿದೆ. ಅಧಿಕಾರಿಗಳು ಆಡಳಿತದಲ್ಲಿರುವವರ ಬಕೆಟ್ ಹಿಡಿಯುವ ಕೆಲಸ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಬೇಕಿದೆ ಎಂದರು.