ಬೆಂಗಳೂರು, ಆ.18- ಟೆಲಿಪೋನ್ ಕದ್ದಾಲಿಕೆ ಆರೋಪದ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿರುವುದನ್ನು ಸ್ವಾಗತಿಸುವುದಾಗಿ ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಟೆಲಿಪೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆಗೆ ಆದೇಶಿಸಿರುವುದು ತಮಗೆ ಸಂತೋಷವಾಗಿದೆ ಎಂದಿರುವ ವಿಶ್ವನಾಥ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೆಲಿಪೋನ್ ಕದ್ದಾಲಿಕೆಯಂತಹ ನೀಚ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೋನ್ ಟ್ಯಾಪಿಂಗ್ ಮಾಡಿ ಬ್ಲಾಕ್ಮೇಲ್ ಮಾಡುವ ಕೆಲಸ ಮಾಡಿದ್ದರು. ಇವರು ಒಂದು ರೀತಿಯಲ್ಲಿ ಭಯೋತ್ಪಾದಕರಿದ್ದಂತೆ ಎಂದು ಟೀಕಿಸಿದ್ದಾರೆ.
ತಾವು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ನಮ್ಮ ಪಕ್ಷದ ಮುಖ್ಯಮಂತ್ರಿಯಾಗಿ ನನ್ನ ಪೋನನ್ನು ಕದ್ದಾಲಿಸುವಂತಹ ಕೆಲಸ ಮಾಡಿದ್ದಾರೆ. ಕದ್ದಾಲಿಕೆ ಬಗ್ಗೆ ತನಿಖೆಗೆ ವಹಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದಲ್ಲಿ ಯಾವ ಸರ್ಕಾರ ಇದೆ ಎಂಬುದು ಮುಖ್ಯವಲ್ಲ. ತನಿಖೆಯಿಂದ ಸತ್ಯಾಂಶ ಹೊರಬರಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.