ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಆರಂಭವಾದ ಭರ್ಜರಿ ಲಾಬಿ

ಬೆಂಗಳೂರು,ಆ.18-ಬಹುನಿರೀಕ್ಷಿತ ಸಚಿವ ಸಂಪುಟ ರಚನೆ ಮಂಗಳವಾರ ನಿಗದಿಯಾದ ಬೆನ್ನಲ್ಲೇ ಬಿಜೆಪಿಯೊಳಗೆ ಸಚಿವ ಸ್ಥಾನ ಅಲಂಕರಿಸಲು ಭರ್ಜರಿ ಲಾಬಿ ಆರಂಭವಾಗಿದ್ದು, ವರಿಷ್ಠರಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಮೊದಲ ಹಂತದಲ್ಲಿ 13ರಿಂದ 14 ಸಚಿವರು ಮಾತ್ರ ಸಂಪುಟಕ್ಕೆ ಸೇರ್ಪಡೆಯಾಗುವ ಸಾದ್ಯತೆ ಇದ್ದು, ಇರುವ 105 ಶಾಸಕರಲ್ಲಿ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದೇ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಈ ಮೊದಲು ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿ ಬೆಂಗಳೂರಿನಲ್ಲೇ ಸಿದ್ದಗೊಳ್ಳುತ್ತಿತ್ತು.ಇದೇ ಮೊದಲ ಬಾರಿಗೆ ಸಚಿವರ ಪಟ್ಟಿ ದೆಹಲಿ ಅಂಗಳ ತಲುಪಿರುವುದರಿಂದ ಗೂಟದ ಕಾರಿನ ಸೌಭಾಗ್ಯ ಯಾರಿಗೆ ಎಂಬ ಯಕ್ಷ ಪ್ರಶ್ನೆ ಬಿಜೆಪಿ ವಲಯದಲ್ಲಿ ಉದ್ಭವವಾಗಿದೆ.

ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟಕ್ಕೆ ತೆಗೆದುಕೊಳ್ಳುವವರ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡಿದ್ದಾರೆ.ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದೇನೆ, ಅವರ ಹಿನ್ನೆಲೆ, ಅನಿವಾರ್ಯತೆ ಎಲ್ಲವನ್ನು ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.

ಯಡಿಯೂರಪ್ಪ ನೀಡಿರುವ ಪಟ್ಟಿಗೆ ಅಮಿತ್ ಷಾ ತಕ್ಷಣವೇ ಒಪ್ಪಿಗೆ ಸೂಚಿಸಿಲ್ಲ. ನೀವು ಮಂಗಳವಾರ ಸಂಪುಟ ವಿಸ್ತರಣೆಗೆ ಸಮಯ ನಿಗದಿಪಡಿಸಿಕೊಳ್ಳಿ ನಾವು ಪಟ್ಟಿಯನ್ನು ಅಂತಿಮಗೊಳಿಸಿ ಕಳುಹಿಸಿಕೊಡುತ್ತೇವೆ ಎಂದು ಹೇಳಿರುವುದು ಸಚಿವ ಆಕಾಂಕ್ಷಿಗಳಲ್ಲಿ ಆತಂಕ ಹುಟ್ಟಿಸಿದೆ.

ಈ ಬಾರಿ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಸಿಎಂ ಯಡಿಯೂರಪ್ಪ ಸೇರಿದಂತೆ ಯಾರ ಮೇಲೂ ಒತ್ತಡ ಹಾಕುವಂತಿಲ್ಲ. ಜಾತಿ, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರಿಗೆ ಕೆಲವು ಮಾನದಂಡಗಳನ್ನು ವಿಧಿಸಿದೆ.

ಪಕ್ಷದ ನಿಷ್ಠೆ, ಕ್ಷೇತ್ರದಲ್ಲಿ ಜನರೊಂದಿಗಿನ ಒಡನಾಟ, ವೈಯಕ್ತಿಕ ಚಾರಿತ್ರ್ಯ, ಕಳಂಕರಹಿತರು, ಸಮಾಜದಲ್ಲಿ ತಮ್ಮದೇ ಆದ ಘನತೆ ಗೌರವಗಳನ್ನು ಗಳಿಸಿದವರು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಬಿಎಸ್‍ವೈಗೆ ಸೂಚಿಸಿದ್ದಾರೆ.

ಹೀಗಾಗಿ ಚೊಚ್ಚಲ ಸಂಪುಟ ರಚನೆಯಲ್ಲಿ ಮಂತ್ರಿ ಸ್ಥಾನದ ಭಾಗ್ಯ ಯಾರ್ಯಾರಿಗೆ ಸಿಗುತ್ತದೆ ಎಂಬುದು ಕೊನೆ ಕ್ಷಣದವರೆಗೂ ಗುಟ್ಟಾಗೇ ಉಳಿಯಲಿದೆ.

ಬಿಎಸ್‍ವೈ ಆಪ್ತರಿಗಿಲ್ಲ ಮಂತ್ರಿಸ್ಥಾನ:
ಮೂಲಗಳ ಪ್ರಕಾರ ಸಂಪುಟ ರಚನೆಯಲ್ಲಿ ದೆಹಲಿ ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರಿಗೆ ಸಂಪುಟದಲ್ಲಿ ಮಣೆ ಹಾಕದಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರಮುಖವಾಗಿ ಯಡಿಯೂರಪ್ಪ ತಮ್ಮ ಅಪ್ತರೆನಿಸಿದ ಬಸವರಾಜ್ ಬೊಮ್ಮಾಯಿ, ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಕೆ.ಜಿ.ಬೋಪಯ್ಯ, ಪೂರ್ಣಿಮಾ ಶ್ರೀನಿವಾಸ್, ರಾಜುಗೌಡ ನಾಯಕ್, ಬಸವನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಹರತಾಳ್ ಹಾಲಪ್ಪ ಸೇರಿದಂತೆ ಮತ್ತಿತರರಿಗೆ ಮಣೆ ಹಾಕಲು ಮುಂದಾಗಿದ್ದರು. ಆದರೆ ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ಬಿಎಸ್‍ವೈ ಆಪ್ತರ ಬದಲು ಬೇರೊಬ್ಬರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಗ್ಗಂಟಾದ ಆಯ್ಕೆ:
ರಾಜಧಾನಿ ಬೆಂಗಳೂರಿನಿಂದ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ಈವರೆಗೂ ತೀರ್ಮಾನವಾಗಿಲ್ಲ. ಬೆಂಗಳೂರಿನಿಂದ ಆರ್.ಅಶೋಕ್ ಹೊರತುಪಡಿಸಿದರೆ ಮಲ್ಲೇಶ್ವರಂನ ಡಾ.ಸಿ.ಎನ್.ಅಶ್ವಥ್ ನಾರಾಯಣ, ರಾಜಾಜಿನಗರದ ಎಸ್.ಸುರೇಶ್‍ಕುಮಾರ್, ಯಲಹಂಕದ ಎಸ್.ಆರ್.ವಿಶ್ವನಾಥ್, ಮಹದೇವಪುರದ ಅರವಿಂದ ಲಿಂಬಾವಳಿ, ಬಸವನಗುಡಿಯ ರವಿಸುಬ್ರಹ್ಮಣ್ಯ ಕೂಡ ರೇಸ್‍ನಲ್ಲಿದ್ದಾರೆ.

ಮೈಸೂರಿನಿಂದ ಎಸ್.ಎ.ರಾಮದಾಸ್ ಆಕಾಂಕ್ಷಿಯಾಗಿದ್ದರೂ ಈವರೆಗೂ ಹಸಿರು ನಿಶಾನೆ ಸಿಕ್ಕಿಲ್ಲ. ತುಮಕೂರಿನಿಂದ ಜೆ.ಸಿ.ಮಾಧುಸ್ವಾಮಿ ಹೆಸರುಗಳು ಬಹುತೇಕ ಖಚಿತವಾಗಿದೆ.

ಚಿತ್ರದುರ್ಗದಿಂದ ತಿಪ್ಪಾರೆಡ್ಡಿ, ಚಂದ್ರಪ್ಪ ಮತ್ತು ಪೂರ್ಣಿಮಾ ಶ್ರೀನಿವಾಸ್ ನಡುವೆ ಬಿರುಸಿನ ಸ್ಪರ್ಧೆ ಇದೆ. ಬಳ್ಳಾರಿಯಿಂದ ಶ್ರೀರಾಮುಲು, ಕರುಣಾಕರ ರೆಡ್ಡಿ ಆಕಾಂಕ್ಷಿಯಾಗಿದ್ದರೆ, ಕೊಪ್ಪಳದಲ್ಲಿ ಹಾಲಪ್ಪ ಆಚಾರ್, ರಾಯಚೂರಿನಿಂದ ಶಿವನಗೌಡ ನಾಯಕ್, ಯಾದಗಿರಿಯಿಂದ ರಾಜುಗೌಡ ನಾಯಕ್,ಬೀದರ್‍ನಿಂದ ಪ್ರಭು ಚವ್ಹಾಣ್, ರಘುನಾಥ್ ಮಲಕಾಪುರೆ, ಬಿಜಾಪುರದಿಂದ ಬಸವನಗೌಡ ಪಾಟೀಲ್ ಯತ್ನಾಳ್, ಎಸ್.ಎ.ನಡಹಳ್ಳಿ, ಕಲ್ಬುರ್ಗಿಯಿಂದ ದತ್ತಾತ್ರೇಯ ಪಾಟೀಲ್ ರೇವೂರ ರೇಸ್‍ನಲ್ಲಿದ್ದಾರೆ.

ಹಾವೇರಿಯಿಂದ ನೆಹರು ಓಲೇಕಾರ್, ಸಿ.ಎಂ.ಉದಾಸಿ, ಧಾರವಾಡದಿಂದ ಜಗದೀಶ್ ಶೆಟ್ಟರ್, ಬೆಳಗಾವಿಯಿಂದ ಉಮ್ಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಶಂಕರ್ ಪಾಟೀಲ್ ಮುನೇನಕೊಪ್ಪ, ದಾವಣಗೆರೆಯಿಂದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಶಿವಮೊಗ್ಗದಿಂದ ಹರತಾಳ್ ಹಾಲಪ್ಪ, ಕುಮಾರ್ ಬಂಗಾರಪ್ಪ, ಅರಗ ಜ್ಞಾನೇಂದ್ರ, ಉಡುಪಿಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್‍ಕುಮಾರ್, ದಕ್ಷಿಣಕನ್ನಡದಿಂದ ಎಸ್.ಅಂಗಾರ, ಮಡಿಕೇರಿಯಿಂದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್ ನಡುವೆ ಬಿರುಸಿನ ಸ್ಪರ್ಧೆ ಇದೆ.

ಹೀಗಾಗಿ ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನದ ಸೌಭಾಗ್ಯ ಯಾರಿಗೆ ಸಿಗುತ್ತದೆ ಎಂಬುದು ಮೀನಿನ ಹೆಜ್ಜೆಯಷ್ಟೇ ಕುತೂಹಲಕಾರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ