ಬೆಂಗಳೂರು, ಆ.18- ಸಾಧನೆಗಳ ಪರಾಮರ್ಶೆಯೊಂದಿಗೆ ನಾಗರಿಕ ಸ್ನೇಹಿಯಾಗಿ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತನ್ನ ಎಲ್ಲ ಶಾಖೆಗಳಿಗೆ ಆಂಧ್ರ ಬ್ಯಾಂಕ್ ಇಂದು ಮಹತ್ವದ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದ ಆರಂಭವಾಗಿರುವ ಎರಡು ದಿನಗಳ ವಲಯ ಮಟ್ಟದ ಸಲಹಾ ಮತ್ತು ಆಲೋಚನಾ ಮಾಹಿತಿ ಸಭೆಯಲ್ಲಿ ಆಂಧ್ರ ಬ್ಯಾಂಕ್ ತನ್ನ ಎಲ್ಲ ಶಾಖೆಗಳು ಮತ್ತು ಅವುಗಳ ಮುಖ್ಯಸ್ಥರು/ಸಿಬ್ಬಂದಿಗೆ ಕೆಲವು ಮಹತ್ವದ ಸಲಹೆ-ಸೂಚನೆಗಳನ್ನು ನೀಡಿದೆ.
ಬ್ಯಾಂಕ್ಗಳ ಸಾಧನಾ ಪರಾಮರ್ಶೆ ಮತ್ತು ಆಲೋಚನಾ ಸೃಷ್ಟಿಗಾಗಿ ವಿಶೇಷವಾಗಿ ನಡೆಸಲಾದ ವಲಯ ಮಟ್ಟದ ಈ ಸಭೆಯಲ್ಲಿ ರಾಷ್ಟ್ರೀಯ ಆದ್ಯತೆಗಳೂ ಸೇರಿದಂತೆ ಎಲ್ಲ ವರ್ಗದ ಗ್ರಾಹಕರಿಗೆ ಸಾಲ ಸೌಲಭ್ಯ ಸೇರಿದಂತೆ ಬ್ಯಾಂಕ್ನಿಂದ ಲಭಿಸಬಹುದಾದ ಎಲ್ಲ ಸೌಕರ್ಯಗಳನ್ನೂ ಸಮರ್ಪಕವಾಗಿ ತಲುಪಿಸುವಂತೆ ಚರ್ಚಿಸಿ ಶಾಖೆಗಳಿಗೆ ಈ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಾಯಿತು.
ಬ್ಯಾಂಕಿಂಗ್ ವಲಯದ ಮುಂದೆ ಇರುವ ಸವಾಲುಗಳನ್ನು ನಿಭಾಯಿಸಿ ಭವಿಷ್ಯದ ಕಾರ್ಯತಂತ್ರ ಮತ್ತು ಮುಂದಿನ ಯೋಜನೆಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದ ಅತ್ಯಂತ ಮಹತ್ವದ ಪ್ರಪ್ರಥಮ ವಲಯ ಮಟ್ಟದ ಸಲಹಾ ಸಮಿತಿ ಸಭೆ ಇದಾಗಿತ್ತು.
ವಿವಿಧ ವಲಯಗಳಿಗೆ ಆರ್ಥಿಕ ನೆರವು ಒದಗಿಸಲು ಸಾಲ ಸೌಲಭ್ಯ ಹೆಚ್ಚಿಸುವ ಮಾರ್ಗೋಪಾಯಗಳು, ಅನ್ವೇಷಣೆಯ ತಂತ್ರಜ್ಞಾನವನ್ನು ಇದಕ್ಕಾಗಿ ಸಮರ್ಥವಾಗಿ ಬಳಸಿಕೊಳ್ಳುವಿಕೆಯೊಂದಿಗೆ ಗ್ರಾಹಕ ಸ್ನೇಹಿ ಮತ್ತು ಸಾರ್ವಜನಿಕರ ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನಾಗಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಹಿರಿಯ ನಾಗರಿಕರು, ಕೃಷಿಕರು, ಬೆಳೆಗಾರರು, ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ಯುವ ಉದ್ದಿಮೆದಾರರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಅಗತ್ಯ ಆಶೋತ್ತರಗಳನ್ನು ಈಡೇರಿಸಲು ಹೆಚ್ಚು ಸ್ಪಂದನೆ ರೀತಿಯಲ್ಲಿ ಕಾರ್ಯನಿರ್ವಹಿಸಲು ಈ ಸಭೆಯಲ್ಲಿ ಎಲ್ಲ ಶಾಖೆಗಳಿಗೂ ಆಂಧ್ರ ಬ್ಯಾಂಕ್ನ ಅತ್ಯುನ್ನತ ಅಧಿಕಾರಿಗಳು ಸಲಹೆ ನೀಡಿದರು.
ಆರ್ಥಿಕ ಬೆಳವಣಿಗೆಗೆ ಸಾಲ ಸೌಲಭ್ಯ ಸಹಕಾರ, ಮೂಲ ಸೌಕರ್ಯಾಭಿವೃದ್ಧಿ/ಕೈಗಾರಿಕಾ ಬೆಳವಣಿಗೆಗೆ ಆದ್ಯತೆ, ಕೃಷಿ ಕ್ಷೇತ್ರ ಮತ್ತು ಮೀನುಗಾರಿಕೆಗೆ ಹಣಕಾಸು ನೆರವು, ಜಲಶಕ್ತಿ ಯೋಜನೆ, ಎಂಎಸ್ಎಂಇ ವಲಯ ಮತ್ತು ಮುದ್ರಾ ಸಾಲಗಳು, ಶಿಕ್ಷಣ ಸಾಲಗಳು, ರಫ್ತು ವಹಿವಾಟು ಸಾಲಗಳು, ಹಸಿರು ಆರ್ಥಿಕತೆ, ಸ್ವಚ್ಛ ಭಾರತ, ಮಹಿಳಾ ಸಬಲೀಕರಣ, ನೇರ ಫಲಾನುಭವ ವರ್ಗಾವಣೆ- ಈ ರಾಷ್ಟ್ರೀಯ ಆದ್ಯತೆಗಳಿಗೆ ಪ್ರಾಧಾನ್ಯತೆ ನೀಡಲು ಆಂಧ್ರ ಬ್ಯಾಂಕ್ ವಲಯ ಮಟ್ಟದ ಸಲಹಾ ಮತ್ತು ಆಲೋಚನಾ ಸೃಷ್ಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.