ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಹಾಸನ, ಆ.17- ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಸಮರೋಪಾದಿಯಲ್ಲಿ ಪರಿಹಾರದ ಕೆಲಸ ಆಗಬೇಕಿತ್ತು. ಆದರೆ, ಆಗುತ್ತಿಲ್ಲ. ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ ಎಂದು ಹೇಳಿದರು.
ನಿರಾಶ್ರಿತರಿಗೆ ಅಗತ್ಯ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ.ಅವರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆಯೇ ಹೊರತು ಇದು ಜನಪ್ರತಿನಿಧಿಗಳ ಸರ್ಕಾರ ಅಲ್ಲ ಎಂದು ತಿಳಿಸಿದರು.

ಮಂತ್ರಿಗಳಿಲ್ಲದೆ ಮುಖ್ಯಮಂತ್ರಿ ಒಬ್ಬರೇ ಪ್ರಯತ್ನ ಮಾಡುತ್ತಿದ್ದಾರೆ.ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡಿಸುವವರು ಇಲ್ಲದಂತಾಗಿದೆ.ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ.ಬಿಜೆಪಿ ಸರ್ಕಾರವಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗುತ್ತಿಲ್ಲ ಎಂದು ಹೇಳಿದರು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಿಂದ ಭಾರೀ ಅನಾಹುತಗಳು ಸಂಭವಿಸಿವೆ. ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸದ ಪ್ರಧಾನಮಂತ್ರಿಯವರ ತಾತ್ಸಾರ ಮನೋಭಾವನೆಗೆ ಇದು ನಿದರ್ಶನವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದಾರೆ.ಅವರ ಹೇಳಿಕೆಗಳನ್ನು ಗಮನಿಸಿದರೆ ಕೇಂದ್ರದಿಂದ ಎಷ್ಟು ಪ್ರಮಾಣದ ಹಣ ಬಿಡುಗಡೆ ಮಾಡುತ್ತಾರೆ ಎಂಬ ವಿಶ್ವಾಸ ಅವರಿಗೇ ಇಲ್ಲದಂತಾಗಿದೆ.ಕೇಂದ್ರ ಸರ್ಕಾರ ಕಾನೂನು, ಸಂವಿಧಾನ ತಿದ್ದುಪಡಿ ವಿಷಯದಲ್ಲಿ ಯಾರನ್ನೂ ಕೇಳದೆ ಆತುರವಾಗಿ ನಿರ್ಧಾರ ಕೈಗೊಳ್ಳುತ್ತದೆ.ಅದೇ ಆತುರವನ್ನು ಪ್ರವಾಹದಿಂದ ಆಗಿರುವ ಸಮಸ್ಯೆ ಬಗೆಹರಿಸಲು ತೋರಿಸಲಿ.ರಾಜ್ಯದ ಕೇಂದ್ರ ಮಂತ್ರಿಗಳು ಏಕೆ ಮೌನ ವಹಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಪ್ರವಾಹ ನಿರ್ವಹಣೆ ಸಂಬಂಧ ಸರ್ವಪಕ್ಷ ಸಭೆ ಕರೆದಿಲ್ಲ. ಒಬ್ಬರೇ ಪ್ರಧಾನಿ ಬಳಿ ಹೋದರೆ ಯಾವ ಕೆಲಸವಾಗುತ್ತದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ತಿಳಿಸಿದರು.
ತನಿಖೆಯಾಗಲಿ: ಫೆÇೀನ್ ಕದ್ದಾಲಿಕೆಯಾಗಿದ್ದರೆ ಮುಖ್ಯಮಂತ್ರಿ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಸುಮ್ಮನೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸರ್ಕಾರ ನಡೆಸಲು ಮೈತ್ರಿ ಮಾಡಿಕೊಂಡಿದ್ದೆವು.ಮೈತ್ರಿ ಮುಂದುವರಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ.ಸದ್ಯ ನಾವು ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ