ಬೆಂಗಳೂರು,ಆ.16-ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಅವರಿಗೆ ಸಂಕಷ್ಟಗಳೇ ಎದುರಾಗುತ್ತಿದೆ. ಯಾವ ಕಡೆ ಹೋದರೂ ಮಾಜಿ ಸಿಎಂ ಸಿಕ್ಕಿ ಬೀಳುತ್ತಿದ್ದಾರೆ.
ಪೋನ್ ಟ್ಯಾಪಿಂಗ್ ಆರೋಪ ಎದುರಿಸುತ್ತಿರುವ ಎಚ್ಡಿಕೆ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಮುಂದಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ಮೇರೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ಕಾಂಗ್ರೆಸ್ ನಾಯಕರ ಫೋನ್ಗಳು ಟ್ಯಾಪ್ ಆಗಿರುವುದಕ್ಕೆ ಈಗಾಗಲೇ ಮೈತ್ರಿ ನಾಯಕರು ಗರಂ ಆಗಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.ಮೈತ್ರಿ ಸರ್ಕಾರದ ವಿರುದ್ಧ ಯಾರ್ಯಾರು ಪಿತೂರಿ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಫೋನ್ಗಳನ್ನು ಟ್ಯಾಪಿಂಗ್ ಮಾಡಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ.ಈ ಹಿನ್ನೆಲೆ ಮಾಜಿ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಸಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ನಾಯಕರ ವಿರುದ್ಧ ಫೋನ್ ಟ್ಯಾಪಿಂಗ್ ನಡೆಸಿದ ಕುಮಾರಸ್ವಾಮಿ ವಿರುದ್ಧ ಈಗಾಗಲೇ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ.ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.ಈ ಹಿನ್ನೆಲೆ ಬಿಎಸ್ ಯಡಿಯೂರಪ್ಪ ಕೂಡ ಕುಮಾರಸ್ವಾಮಿ ಮೇಲೆ ಸಿಬಿಐ ತನಿಖೆ ನಡೆಸುವ ಮೂಲಕ ಅವರನ್ನು ಕಟ್ಟಿಹಾಕುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಆಪರೇಷನ್ ಕಮಲ ಸಮಯದಲ್ಲಿ ಕಾಂಗ್ರೆಸ್ ಸೇರಿದಂತೆ ಬಿಜೆಪಿ ಶಾಸಕರ ದೂರವಾಣಿ ಸಂಭಾಷಣೆಯನ್ನು ಕದ್ದು ಆಲಿಸಲಾಗಿದೆ. ಇಲ್ಲಿ ಸಾಕಷ್ಟು ಖಾಸಗಿ ವಿಚಾರಗಳನ್ನು ಇದ್ದು, ಇದು ಹೊರಬಂದರೆ ಬಿಜೆಪಿ ಸರ್ಕಾರಕ್ಕೆ ಮುಳುವಾಗಲಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಕಂಟಕವಾಗಲಿದ್ದಾರೆ. ಹೀಗಾಗಿ ಈ ದೂರವಾಣಿ ಸಂಭಾಷಣೆಗಳು ಹೊರಬರದಂತೆ ಕಾಪಾಡಬೇಕು ಎಂದರೆ ಕುಮಾರಸ್ವಾಮಿ ಮೇಲೆ ತನಿಖೆ ಅನಿವಾರ್ಯವಾಗಿದೆ.ಕುಮಾರಸ್ವಾಮಿ ವಿರುದ್ಧ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂಬ ಮಾತು ಬಿಜೆಪಿ ನಾಯಕರ ಬಾಯಲ್ಲಿ ಕೇಳಿ ಬಂದಿದೆ.
ಫೋನ್ ಕದ್ದಾಲಿಕೆ ಪ್ರಕರಣಕ ದೊಡ್ಡ ಅಪರಾಧ ಹೀಗೆ ಬಿಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗಲಿದೆ.ಆ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಸಿಎಂ ಯಡಿಯೂರಪ್ಪಗೆ ಸೂಚನೆ ನೀಡಿದ್ದಾರೆ.ಅಮಿತ್ ಶಾ ಸೂಚನೆಯ ಮೇರೆಗೆ ಯಡಿಯೂರಪ್ಪ ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ನೀಡುವ ಸಾಧ್ಯತೆ ಇದೆ.ಸದ್ಯ ಈಗಾಗಲೇ ಡಿಜಿಪಿ ನೀಲಮಣಿ ವರದಿಯನ್ನು ಸರ್ಕಾರದ ಗೃಹ ಇಲಾಖೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಗೃಹ ಇಲಾಖೆಗೆ ಹೋಗಿರೋ ಹಿನ್ನೆಲೆಯಲ್ಲಿ ತನಿಖೆ ಮೊದಲು ಸಿಐಡಿಗೆ ಹೋಗಲಿದೆ.ಹೀಗಾಗಿ ಇಂದು ಸಿಐಡಿ ತನಿಖೆಗೆ ವಹಿಸೋ ಎಲ್ಲಾ ಸಾಧ್ಯತೆಗಳು ಇವೆ. ಇದರ ಬೆನ್ನಲ್ಲೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಪ್ರಾರಂಭ ಮಾಡುತ್ತಾರೆ.ಸದ್ಯ ಸಿಎಂ ಯಡಿಯೂರಪ್ಪ ದೆಹಲಿಯಲ್ಲಿ ಇರುವುದರಿಂದ ದೊಡ್ಡ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಮತ್ತೊಮ್ಮೆ ಕೇಂದ್ರ ಗೃಹ ಸಚಿವರ ಭೇಟಿ ಮಾಡಲಿದ್ದಾರೆ. ಮತ್ತೆ ಫೋನ್ ಕದ್ದಾಲಿಕೆ ಪ್ರಕರಣದ ಸಾಧಕ ಬಾಧಕ ಮನವರಿಕೆ ಮಾಡಲಿದ್ದಾರೆ.ದೆಹಲಿಯಿಂದ ಬಂದ ಬಳಿಕ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆ ಇದೆ.
ರಾಜ್ಯದ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸದಂತೆ ನಗರ ಪೊಲೀಸ್ ಆಯುಕ್ತರು ಕೂಡ ಮನವಿ ಮಾಡಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಯಿಂದ ತನಿಖೆ ಬೇಡ ಎಂದಿದ್ದಾರೆ. ಇದೆಲ್ಲದರ ಜೊತೆಗೆ ಎಲ್ಲಾ ರಾಜಕಾರಣಿಗಳು ನಮ್ಮ ಮೊಬೈಲ್ ಟ್ಯಾಪ್ ಆಗಿದೆ ಎಂದು ಹೇಳುತ್ತಿದ್ದಾರೆ.ಇದರಿಂದ ಪ್ರಕರಣ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.ವಿಧಿ ಇಲ್ಲದೆ ಯಡಿಯೂರಪ್ಪ ಪ್ರಕರಣವನ್ನು ಸಿಬಿಐಗೆ ವಹಿಸೋ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ತಿಳಿದುಬಂದಿದೆ.