ಕಾಂಗ್ರೇಸ್‍ಗಿಂತ ಬಿಜೆಪಿಯೇ ಪರವಾಗಿಲ್ಲ-ಹಲವು ಜೆಡಿಎಸ್ ಶಾಸಕರ ಅಭಿಪ್ರಾಯ

ಬೆಂಗಳೂರು,ಆ.15-ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಈ ಪಕ್ಷಗಳ ಮೈತ್ರಿಗೂ ತೆರೆ ಬೀಳುವ ಸಾಧ್ಯತೆಗಳು ಕಾಣಿಸಿಕೊಳ್ಳಲಾರಂಭಿಸಿದೆ. ಜೆಡಿಎಸ್ ನಾಯಕರ ಮಟ್ಟದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಸುವ ಮನಸ್ಸು ಇರಬಹುದಾದರೂ ಶಾಸಕರು ಮಾತ್ರ ಅಂತಹ ಮನಸ್ಥಿತಿಯಲ್ಲಿರುವಂತೆ ಕಂಡುಬರುತ್ತಿಲ್ಲ.

ಮಿತ್ರನಾಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಗಿಂತ ಸರ್ಕಾರ ಉರುಳಿಸಿದ ರಾಜಕೀಯ ಶತ್ರು ಬಿಜೆಪಿಯೇ ಪರವಾಗಿಲ್ಲ ಎಂಬ ಅಭಿಪ್ರಾಯಕ್ಕೆ ಜೆಡಿಎಸ್ ನ ಹಲವು ಶಾಸಕರು ಬಂದಂತಿದೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸದ್ಯಕ್ಕಂತೂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಅಪಾಯವಿಲ್ಲದೆ ಅಧಿಕಾರದಲ್ಲಿ ಮುಂದುವರಿಯುತ್ತದೆ. ಸರ್ಕಾರ ಬದಲಾಗಬೇಕಾದರೆ ಚುನಾವಣೆ ಬರಬೇಕೇ ಹೊರತು ವಾಮ ಮಾರ್ಗಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.

ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿಕೊಳ್ಳಬಹುದು. ಆ ಮೂಲಕ ಮುಂದಿನ ಚುನಾವಣೆ ವೇಳೆ ಕ್ಷೇತ್ರವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಬಹುದು. ಕ್ಷೇತ್ರದಲ್ಲಿ ಕೆಲಸ-ಕಾರ್ಯಗಳು ಸಮರ್ಪಕವಾಗಿ ನಡೆದರೆ ಮುಂದೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬರಬಹುದು ಎಂಬ ಯೋಚನೆ ಜೆಡಿಎಸ್ ಶಾಸಕರದ್ದು.

ಈ ಹಿಂದೆ (2006-07) ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ನಡೆದುಕೊಂಡಿದ್ದ ರೀತಿಯೂ ಶಾಸಕರಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಬಗ್ಗೆ ಒಲವು ಹೆಚ್ಚಾಗಲು ಕಾರಣವಿರಬಹುದು. 2004ರಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ರಚಿಸಿದ್ದವು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಲ್ಲಿ ಒಡಕುಂಟಾಗಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ಗುಂಪು ಕಾಂಗ್ರೆಸ್ ಕಡೆ ಒಲವು ತೋರಲಾರಂಭಿಸಿತ್ತು. ಹೀಗಾಗಿ ಎಚ್. ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆ ಎಚ್. ಡಿ. ದೇವೇವೇಗೌಡರ ಇಚ್ಛೆಗೆ ವಿರುದ್ಧವಾಗಿ ಬಿಜೆಪಿ ಜತೆ ಕೈಜೋಡಿಸಿದ್ದರು.

ಆಗಲೇ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದ ಜೆಡಿಎಸ್ ಶಾಸಕರು ದೇವೇಗೌಡರ ಮಾತು ಮೀರಿ ಕುಮಾರಸ್ವಾಮಿ ಜತೆ ನಿಂತಿದ್ದರು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಈ ಅವಧಿಯಲ್ಲಿ ಬಿಜೆಪಿ ನಡೆದುಕೊಂಡ ರೀತಿ, ಸರ್ಕಾರಕ್ಕೆ ನೀಡಿದ ಸಹಕಾರ ಈಗಲೂ ಜೆಡಿಎಸ್ ಶಾಸಕರಿಗೆ ನೆನಪಿದೆ.

ಒಪ್ಪಂದದಂತೆ ಕುಮಾರಸ್ವಾಮಿ ಅವರು ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಸರ್ಕಾರ ಪತನವಾಯಿತೇ ಹೊರತು ಬಿಜೆಪಿ ಕಡೆಯಿಂದ ಮೈತ್ರಿಗೆ ಭಂಗವಾಗುವ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಇದರ ಪರಿಣಾಮ 2008ರ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋತು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಸೋಲಿಗೆ ಜೆಡಿಎಸ್ ನ ವಚನ ಭ್ರಷ್ಠತೆಯೇ ಕಾರಣವಾಗಿತ್ತು.

2018ರ ವಿಧಾನಸಭೆ ಚುನಾವಣೆಯಲ್ಲೂ ಅತಂತ್ರ ಪರಿಸ್ಥಿತಿ ಎದುರಾದಾಗ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಅನೇಕ ಶಾಸಕರಿಗೆ ಬಿಜೆಪಿ ಜತೆ ಹೋಗುವುದು ಸೂಕ್ತ ಎಂಬ ಭಾವನೆ ಇತ್ತು. ಆದರೆ, ದೇವೇಗೌಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತು ಕಾಂಗ್ರೆಸ್ ನವರು ತಮಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರಿಂದಾಗಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜತೆಗಿನ ಮೈತ್ರಿಯನ್ನೇ ಆಯ್ಕೆ ಮಾಡಿಕೊಂಡರು.

ಈ ಮೈತ್ರಿಯಿಂದ ಪಕ್ಷ ಸಂಘಟಿಸಬಹುದು ಎಂದು ಮಹಾಘಟಬಂಧನ್ ಮಾಡಹೊರಟರು. ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿದರು. ಆದರೆ, ಅದರಿಂದ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಯಿತೇ ವಿನಃ ಲಾಭ ಸಿಗಲೇ ಇಲ್ಲ. ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲೂ ಮೈತ್ರಿಯಿಂದ ಬೇಸತ್ತ ಪಕ್ಷದ ಕಾರ್ಯಕರ್ತರು ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತರು.

ಹೀಗಾಗಿ ಫಲಿತಾಂಶ ಬಂದಾಗಲೇ ಕಾಂಗ್ರೆಸ್ ಜತೆಗಿನ ಮೈತ್ರಿ ತಮಗೆ ಇನ್ನಷ್ಟು ಅಪಾಯ ತಂದೊಡ್ಡಬಹುದು ಎಂಬ ಆತಂಕ ಶಾಸಕರನ್ನು ಕಾಡಲಾರಂಭಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮೈತ್ರಿಯ ಗೊಂದಲ ಸರ್ಕಾರವನ್ನೇ ಉರುಳಿಸಿತ್ತು.

ಹೀಗಾಗಿ ಜೆಡಿಎಸ್ ಶಾಸಕರಿಗೆ ಬಿಜೆಪಿ ಬಗ್ಗೆ ಇದ್ದ ಒಲವು ಕೊಂಚ ಹೆಚ್ಚಾಗಿದೆ. ಇದಕ್ಕೆ ಯಡಿಯೂರಪ್ಪ ಅವರು ಹಿಂದೆ ನಡೆದುಕೊಂಡ ರೀತಿಯೂ ಕಾರಣ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಹಳೆಯ ಜಿದ್ದು ಸಾಧಿಸದೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದರು ಅಷ್ಟೇ ಅಲ್ಲ, ವರ್ಗಾವಣೆ ಮತ್ತಿತರ ವಿಚಾರದಲ್ಲಿ ಅವರ ಮಾತಿಗೂ ಮನ್ನಣೆ ನೀಡುತ್ತಿದ್ದರು.

ಇದೀಗ ಮತ್ತೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು, ತಾವು ಸೇಡಿನ ರಾಜಕಾರಣ ಮಾಡುವುದಿಲ್ಲ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ನಾವು ಸಹಕರಿಸಿದರೆ, ನಮ್ಮ ಕ್ಷೇತ್ರದ ಕೆಲಸಗಳಿಗೆ ಸರ್ಕಾರ ಸಹಕರಿಸುತ್ತದೆ ಎಂಬ ಅಭಿಪ್ರಾಯ ಜೆಡಿಎಸ್ ನ ಬಹುತೇಕ ಶಾಸಕರಿಂದ ವ್ಯಕ್ತವಾಗಿದೆ.

ಸದ್ಯ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿಸಿದ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಪಾಲಿಗೆ ವಿಲನ್ ಆಗಿರಬಹುದು. ಆದರೆ, ಪಕ್ಷ ಮತ್ತು ವೈಯಕ್ತಿಕ ಭವಿಷ್ಯದ ದೃಷ್ಟಿಯಿಂದ ಇವರಿಗೆ ಕಾಂಗ್ರೆಸ್ ಗಿಂತ ಬಿಜೆಪಿಯೇ ವಾಸಿ ಎನ್ನುವಂತಾಗಿದೆ. ಇವರ ಅಭಿಪ್ರಾಯಕ್ಕೆ ನಾಯಕರು ಮನ್ನಣೆ ನೀಡದೇ ಇದ್ದರೆ ಮುಂದೆ ಜೆಡಿಎಸ್ ಪಕ್ಷಕ್ಕೆ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಾದರೂ ಅಚ್ಚರಿಯಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ