ನವದೆಹಲಿ: ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವ್ ಆಗಲು ಅಭಿಯಾನ ಆರಂಭವಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಚೀಲವನ್ನು ನಮ್ಮಿಂದ ನಿರೀಕ್ಷಿಸಬೇಡಿ ಎಂಬ ಬೋರ್ಡ್ ಪ್ರತಿ ಅಂಗಡಿಯಲ್ಲೂ ಇರಲಿ. ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್‍ಗಳನ್ನು ಬಳಕೆ ಮಾಡಬೇಕಿದೆ ಎಂದು ಜಾಗೃತಿ ಮೂಡಿಸಿದರು.
ಸ್ವದೇಶಿಯ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಕೆ ಮಾಡಿ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸೋಣ. ದೇಶದಲ್ಲಿರುವ ಬಲಿಷ್ಠ ಸರ್ಕಾರವನ್ನು ಪ್ರಪಂಚವೇ ಗುರುತಿಸಿದೆ. ವಿದೇಶದಕ್ಕೆ ಪ್ರತಿ ಜಿಲ್ಲೆಯಿಂದಲೂ ಒಂದಲ್ಲ ಒಂದು ರೀತಿಯ ಉತ್ಪನ್ನಗಳು ರಫ್ತು ಮಾಡಬೇಕು ಎಂದು ತಿಳಿಸಿದರು.
ದೇಶದ ಅಭಿವೃದ್ಧಿಗೆ ಶಾಂತಿ ಹಾಗೂ ಸುರಕ್ಷತೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಸೈನಿಕರಿಗೆ, ಭದ್ರತಾ ಪಡೆಗೆ ನಾನು ನಮಿಸುತ್ತೇನೆ. ನಮ್ಮ ನೆರೆಯ ದೇಶಗಳು ಭಯೋತ್ಪಾದನೆಗೆ ತತ್ತರಿಸಿ ಹೋಗಿವೆ. ಭಾರತೀಯ ರಕ್ಷಣಾ ಪಡೆಯು ದೇಶದ ಸಂರಕ್ಷಣೆಗಾಗಿ ಪ್ರಶಂಸನೀಯ ಕೆಲಸ ಮಾಡಿವೆ ಎಂದರು.
ದೇಶವು ಬಾಹ್ಯಾಕಾಶದಲ್ಲಿ ಹೊಸ ಮೈಲುಗಲ್ಲು ಇಟ್ಟಿದೆ. ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.