ದೂರವಾಣಿ ಕದ್ದಾಲಿಕೆ ಪ್ರಕರಣ-ಸಿಬಿಐ ಅಥವಾ ಸಿಐಡಿ ತನಿಖೆಗೆ ಮುಂದಾದ ಸರ್ಕಾರ

ಬೆಂಗಳೂರು,ಆ.15- ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಪತ್ರಕರ್ತರ ದೂರವಾಣಿ ಕದ್ದಾಲಿಕೆ ಪ್ರಕರಣ ಹಲವರಿಗೆ ಕಾನೂನಿನ ಸಂಕಷ್ಟ ತರುವ ಸಾಧ್ಯತೆ ಹೆಚ್ಚಳವಾಗಿವೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಿಬಿಐ ಇಲ್ಲವೇ ಸಿಐಡಿಯಿಂದ ತನಿಖೆ ನಡೆಸಲು ಮುಂದಾಗಿದ್ದು, ಹಾಲಿ ಕೆಎಸ್‍ಆರ್‍ಪಿ ಎಡಿಜಿಪಿಯಾಗಿರುವ ಅಲೋಕ್‍ಕುಮಾರ್ ಮೊದಲ ಬಲಿಪಶುಯಾಗುವುದು ಖಚಿತವಾಗಿದೆ.
ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಉನ್ನತಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಲು ತೀರ್ಮಾನಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಫೋನ್ ಕದ್ದಾಲಿಕೆ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅತೃಪ್ತ ಶಾಸಕರು ಸೇರಿದಂತೆ ಮೂರೂ ಪಕ್ಷದ ಪ್ರಮುಖ ನಾಯಕರು ಹಾಗೂ ಅಧಿಕಾರಿಗಳ ಪೋನ್ ಟ್ಯಾಪಿಂಗ್ ಮಾಡಿದ್ದರು ಎಂಬ ಆರೋಪ ಇದೀಗ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಆಕ್ರೋಶಕ್ಕೆ ತುತ್ತಾಗಿದೆ.

ಈವರೆಗೆ ಈ ಕುರಿತು ರಾಜ್ಯದ ಎಲ್ಲಾ ಪ್ರಮುಖ ನಾಯಕರು ಪ್ರತಿಕ್ರಿಯೆ ನೀಡಿದ್ದರು, ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಟ್ವೀಟ್ ಮೂಲಕ ಈ ಕುರಿತ ವಿಚಾರ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, “ಫೋನ್ ಕದ್ದಾಲಿಕೆ ಎಂಬುದು ಗಂಭೀರ ಆರೋಪ. ಹೀಗಾಗಿ ಈ ಕುರಿತು ಸೂಕ್ತ ತನಿಖೆಯಾಗಲಿ, ತಪ್ಪು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುಬೇಕು” ಎಂದು ಆಗ್ರಹಿಸಿದ್ದಾರೆ.

ಈ ಪ್ರಕಣದ ಕುರಿತು ಈಗಾಗಲೇ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಆರ್. ಅಶೋಕ್, ಶ್ರಿರಾಮುಲು, ಸದಾನಂದಗೌಡ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಈ ಕುರಿತು ಟ್ವೀಟ್ ಮಾಡುವ ಮೂಲಕ ವಿರೋಧ ಪಕ್ಷಗಳ ಟೀಕೆಗಳಿಗೆ ಸ್ಪಷ್ಟತೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, “ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು, ಈ ಕುರ್ಚಿಗಾಗಿ ಟೆಲಿಪೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು” ಎಂದು ತಿಳಿಸಿದ್ದರು
ಈ ಪ್ರಕರಣವನ್ನು ಮೂರು ಪಕ್ಷಗಳ ಮುಖಂಡರು ತನಿಖೆ ನಡೆಸಲು ಆಗ್ರಹಿಸಿದ್ದಾರೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಟೆಲಿಫೆÇೀನ್ ಕದ್ದಾಲಿಕೆ ಬಗ್ಗೆ ಸಾಕಷ್ಟು ಮಾತನಾಡಬಲ್ಲೇ ಯಾರು ಹೇಗೆ ದೂರವಾಣಿಗಳನ್ನು ಕದ್ದಾಲಿಕೆ ಮಾಡಿದ್ದಾರೆಂಬುದು ನನಗೆ ಗೊತ್ತು.ಕೇಂದ್ರ ಸರ್ಕಾರವು ಏನು ಮಾಡಿದೇ ಎಂದು ತಿಳಿದಿದ್ದೇನೆ.ಬಿಜೆಪಿ ನಾಯಕರಿಗೆ ಮಾನ ಮರ್ಯಾದೆಯಿದೆಯೇ ಎಂದು ತಿರುಗೇಟು ನೀಡಿದ್ದಾರೆ.

ಟೆಲಿಫೆÇೀನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆಯುತ್ತೇನೆ. ಯಾವ ಕಾರಣಕ್ಕಾಗಿ ಯಾರು ದೂರವಾಣಿಯನ್ನು ಕದ್ದಾಲಿಕೆ ಮಾಡುತ್ತಿದ್ದಾರೆಂದು ರಾಜ್ಯದ ಜನತೆಗೆ ತಿಳಿಯಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ ಸರ್ಕಾರವೇ ಬಿದ್ದು ಹೋಗಿತ್ತು. ಈ ಬಗ್ಗೆ ನಿಷ್ಪಷಪಾತವಾಗಿ ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ
ಮಾಜಿ ಸಚಿವ ಎಂ,ಬಿ.ಪಾಟೀಲ್ ತಿಳಿಸಿದರು.
ತನಿಖೆಗೆ ಆದೇಶ:
ಮೂಲಗಳ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಒಂದೆರಡು ದಿನಗಳಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಿದ್ದಾರೆ.
ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಮ್ಮ ವರದಿಯಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕೆಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಹೀಗಾಗಿ ಯಡಿಯೂರಪ್ಪ ಅವರು, ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಎನ್.ವಿಜಯಭಾಸ್ಕರ್, ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಮತ್ತಿತರರ ಜತೆ ಚರ್ಚೆ ನಡೆಸಿ ಸಿಐಡಿ ಅಥವಾ ಸಿಬಿಐಗೆ ವಹಿಸುವುದೆಂದು ಗಂಭೀರ ಚಿಂತನೆ ನಡೆಸಿದ್ದಾರೆ.
ಇದೀಗ ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಟೆಲಿಫೆÇೀನ್ ಕದ್ದಾಲಿಕೆ ಪ್ರಕರಣ ಬಯಸದೇ ಬಂದ ಭಾಗ್ಯದಂತಾಗಿದೆ. ಭವಿಷ್ಯದಲ್ಲಿ ತಮ್ಮ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಚಕಾರವೆತ್ತದಂತೆ ನೋಡಿಕೊಳ್ಳಬೇಕಾದರೆ ಅವರ ಬಾಯಿ ಮುಚ್ಚಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಈ ಹಿಂದೆ 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಅವರ ಸಾಕಷ್ಟು ಭ್ರಷ್ಟಾಚಾರದ ಪ್ರಕರಣಗಳನ್ನು ಕುಮಾರಸ್ವಾಮಿ ಹೊರತೆಗೆದಿದ್ದರು.ಇದೀಗ ತಮ್ಮ ಸರ್ಕಾರವನ್ನು ಪತನಗೊಳಿಸಿರುವ ಬಿಎಸ್‍ವೈ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಅವರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ.
ಈಗಾಗಲೇ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಿಯೇಂದ್ರ ಬೆಂಗಳೂರಿನ ಬಿಲ್ಡರ್ಸ್ ಜತೆ ನಡೆಸಿರುವ ಮಾತುಕತೆ ಮಾಧ್ಯಮದಲ್ಲಿ ಬಹಿರಂಗಕೊಂಡಿತ್ತು.ಇದರ ಹಿಂದೆ ಕುಮಾರಸ್ವಾಮಿಯವರು ಕೈವಾಡವಿದೆ ಎಂಬುದು ಬಿಎಸ್‍ವೈ ಗುಮಾನಿ ಹೀಗಾಗಿ ಪ್ರಕರಣವನ್ನು ಆದಷ್ಟು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಇದೀಗ ಈ ಪ್ರಕರಣ ದಿನೇ ದಿನೇ ತನ್ನ ಸ್ವರೂಪವನ್ನು ಬದಲಿಸುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕೊರಳಿಗೆ ಸುತ್ತಿಕೊಂಡಿರುವ ಈ ಪ್ರಕರಣದ ಕುರಿತು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಯಾವ ಕ್ರಮ ತೆಗದುಕೊಳ್ಳಲಿದ್ದಾರೆ ಎಂಬ ವಿಷಯದ ಕುರಿತು ಇಡೀ ರಾಜ್ಯದ ರಾಜಕೀಯ ನಾಯಕರು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ಈ ನಡುವೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂಬ ಕೂಗು ಸಹ ಕೇಳಿಬರುತ್ತಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ