
ಚಂಡೀಗಢ, ಆ.13- ರಾಜಧಾನಿ ದೆಹಲಿಯ ಗುರು ರವಿದಾಸ್ ಮಂದಿರ ಧ್ವಂಸದ ಹಿನ್ನೆಲೆಯಲ್ಲಿ ಪಂಜಾಬ್ನ ವಿವಿಧೆಡೆ ಇಂದು ದಲಿತರು ಬಂದ್ ಆಚರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಮತ್ತು ಧರಣಿಯಿಂದಾಗಿ ಚಂಡೀಗಢ, ಜಲಂಧರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ದೆಹಲಿಯ ತುಘಲಕ್ಬಾದ್ನಲ್ಲಿರುವ ಪ್ರಾಚೀನ ಗುರು ರವಿದಾಸ್ ಮಂದಿರವನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನೆಲಸಮಗೊಳಿಸಲಾಯಿತು. ಇದರಿಂದ ಉದ್ರಿಕ್ತಗೊಂಡ ದಲಿತರು ಪಂಜಾಬ್ನಾದ್ಯಂತ ಪ್ರತಿಭಟನೆ ನಡೆಸಿದರು.
ಗುರು ರವಿದಾಸ್ ಸಮಾರೋಹ್ ಸಮಿತಿ ಆಶ್ರಯದಲ್ಲಿ ಅನೇಕ ದಲಿತರು ಜಲಂಧರ್-ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಇಂದು ಬಂದ್ಗೆ ಕರೆ ನೀಡಿರುವ ಸಮಿತಿ ಸ್ವಾತಂತ್ರ್ಯ ದಿನೋತ್ಸವದಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.