
ವಯನಾಡ್, ಆ.13- ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂ ಕುಸಿತಕ್ಕೆ ತುತ್ತಾಗಿರುವ ಕೇರಳದ ನಿರಾಶ್ರಿತರ ಶಿಬಿರದಲ್ಲಿ ಕಲುಷಿತ ಆಹಾರ ಸೇವಿಸಿ 30ಕ್ಕೂ ಹೆಚ್ಚು ಮಂದಿ ಸಂತ್ರಸ್ತರು ಅಸ್ವಸ್ಥರಾಗಿದ್ದಾರೆ.
ಮೊದಲೇ ಪ್ರವಾಹದಿಂದ ಜರ್ಝರಿತರಾಗಿರುವ ಸಂತ್ರಸ್ತರಿಗೆ ಪರಿಹಾರ ಶಿಬಿರಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿರುವ ಜತೆಗೆ ಕಲುಷಿತ ಆಹಾರದಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಸೃಷ್ಟಿಯಾಗಿದೆ.
ಮೂಲಗಳ ಪ್ರಕಾರ ಪ್ರವಾಹ ಪೀಡಿತ ಕೇರಳದ ವಯನಾಡ್ ಜಿಲ್ಲೆಯ ನಿರ್ವಾರಂ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಕಲುಷಿತ ಆಹಾರ ಸೇವಿಸಿ 30 ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿರುವ ಜನರನ್ನು ಮಾನಂತವಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪುನರ್ವಸತಿ ಕೇಂದ್ರದಲ್ಲಿನ ಕಲುಷಿತ ಆಹಾರಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿರಾಶ್ರಿತ ಶಿಬಿರದಲ್ಲಿನ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಾರೆ. ಭೂಕುಸಿತ ಮತ್ತು ಮಹಾ ಮಳೆಗೆ ಇಲ್ಲಿಯವರೆಗೆ 86 ಮಂದಿ ಪ್ರಾಣ ಕಳೆದುಕೊಂಡಿದ್ದು ನಾಪತ್ತೆಯಾದವರ ಸಂಖ್ಯೆ 70ಕ್ಕೂ ಆಗಿದೆ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ.
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ವೀಡಿಯೋ ಸಂವಾದ ನಡೆಸಿ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಅರಿತುಕೊಳ್ಳುತ್ತಿದ್ದರು ಪಿಣರಾಯಿ. ಕೇರಳದಲ್ಲಿ 1654 ಪುನರ್ವಸತಿ ಕೇಂದ್ರಗಳಿದ್ದು 2,87,585 ಮಂದಿ ಆಶ್ರಯ ಪಡೆದಿದ್ದಾರೆ.
ಭಾನವಾರ ಮತ್ತು ಸೋಮವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ವಯನಾಡ್‍ನಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ಪರಾಮರ್ಶಿಸಿ ನೊಂದವರಿಗೆ ಸಾಂತ್ವನ ಹೇಳಿ ಅಗತ್ಯ ಪರಿಹಾರದ ಭರವಸೆ ನೀಡಿದ್ದಾರೆ.