ಬೆಂಗಳೂರು, ಆ.13- ದೇಶದಲ್ಲೇ ಮೊದಲ ಬಾರಿಗೆ ಪ್ರಜೆಗಳಿಂದ ಆಯ್ಕೆಯಾದ ವಿಧಾನಸಭೆ ಅಸ್ತಿತ್ವದಲ್ಲಿದ್ದರೂ ಸಚಿವರಿಲ್ಲದೆ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವ ಸಂದಿಗ್ಧ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ.
ನೆರೆ ಹಾವಳಿಯಿಂದಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವಂತೆ ಸೂಚನೆ ನೀಡಿದೆ.
ರಾಜಕೀಯ ಕ್ಷಿಪ್ರ ಬೆಳವಣಿಗೆ ನಡೆದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಜು.26ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಈವರೆಗೂ ಸಂಪುಟ ರಚನೆ ಮಾಡಲು ಸಾಧ್ಯವಾಗಿಲ್ಲ.
ಸಂಪುಟ ರಚನೆಗಾಗಿ ಒಮ್ಮೆ ದೆಹಲಿಗೆ ಹೋಗಿ ವರಿಷ್ಠರ ಜತೆ ಚರ್ಚಿಸಿದರಾದರೂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಹೈಕಮಾಂಡ್ ಸಂಪುಟ ವಿಸ್ತರಣೆಗಿಂತ ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ ಎಂದು ಹೇಳಿ ಯಡಿಯೂರಪ್ಪ ಅವರನ್ನು ವಾಪಸ್ ಕಳುಹಿಸಿತ್ತು. ಹೀಗಾಗಿ ಸಂಪುಟ ವಿಸ್ತರಣೆಯಾಗಲಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸುವಂತಾಗಿದೆ.
ಈ ಮೊದಲು ಸ್ವಾತಂತ್ರ್ಯ ದಿನಾಚರಣೆ ಹಿಂದೆ-ಮುಂದೆ ಸರ್ಕಾರಗಳು ಅಸ್ಥಿತ್ವಕ್ಕೆ ಬಂದಾಗ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗದೆ ಕೆಲವು ಜಿಲ್ಲೆಗಳಲ್ಲಿ ಸಚಿವರು, ಇನ್ನು ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿರುವ ಪ್ರಸಂಗಗಳಿವೆ.
ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಣಿಕ್‍ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಆದರೆ, ಯಡಿಯೂರಪ್ಪನವರನ್ನು ಹೊರತುಪಡಿಸಿ ಬೇರೆ ಯಾರೂ ಸಂಪುಟಕ್ಕೆ ಸೇರದೇ ಇರುವುದರಿಂದ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಲ್ಲದೆ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸುವ ವಿಲಕ್ಷಣ ಸ್ಥಿತಿ ಬಂದಿದೆ.
ಈ ಮೊದಲು ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆಯ ವೇಳೆ ಬೆಂಗಳೂರಿನಲ್ಲಿ ರಾಜ್ಯಪಾಲರು, ಉಳಿದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ ಉದಾಹರಣೆಗಳಿವೆ.
ಶಾಸಕರ ಭಿನ್ನಮತದಿಂದಾಗಿ ಕಾಂಗ್ರೆಸ್‍ನ ವೀರೇಂದ್ರ ಪಾಟೀಲ್ ಅವರ ಸರ್ಕಾರ 1971ರ ಮಾರ್ಚ್ 18ರಂದು ಪತನಗೊಂಡಿತ್ತು. ಮಾರ್ಚ್ 19ರಿಂದ 1972ರ ಮಾರ್ಚ್ 20ರವರೆಗೂ ಒಂದು ವರ್ಷ ರಾಷ್ಟ್ರಪತಿ ಆಳ್ವಿಕೆ ಇತ್ತು. 1971ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯಪಾಲರು ಬೆಂಗಳೂರಿನಲ್ಲಿ, ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದರು.
ಎಸ್.ಆರ್.ಬೊಮ್ಮಾಯಿ ಅವರು ಕಾಂಗ್ರೆಸ್‍ನಿಂದ ಶಾಸಕಾಂಗ ಪಕ್ಷದ ನಾಯಕರಾಗಿ 1988ರ ಆಗಸ್ಟ್ 13ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರೊಂದಿಗೆ ಕೆಲವು ಸಚಿವರೂ ಪ್ರಮಾಣವಚನ ಸ್ವೀಕರಿಸಿದ್ದರು. ಪೂರ್ಣ ಪ್ರಮಾಣದ ಸಂಪುಟ ರಚನೆಯಾಗದ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದರು.
1989ರ ಏಪ್ರಿಲ್ 21ರಂದು ಬೊಮ್ಮಾಯಿ ಅವರ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಳ್ವೆಕೆ ಜಾರಿಗೆ ಬಂದು ಅದೇ ವರ್ಷ ಸ್ವತಂತ್ರ ದಿನಾಚರಣೆ ವೇಳೆ ರಾಜ್ಯಪಾಲರು ಮತ್ತು ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದರು.
ಈ ಎರಡು ಸಂದರ್ಭಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರೇ ಧ್ವಜಾರೋಹಣ ಮಾಡಿದ್ದಾರೆ.
2011ರ ಆಗಸ್ಟ್ 4ರಂದು ಬಿಜೆಪಿಯ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕೇವಲ 11 ದಿನಗಳಲ್ಲೇ ಅವರಿಗೆ ಧ್ವಜಾರೋಹಣದ ಭಾಗ್ಯ ದೊರಕಿತ್ತು. ಆದರೆ, ಆ ಸಂದರ್ಭದಲ್ಲಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟ ಸಚಿವರೇ ಮುಂದುವರೆದಿದ್ದರಿಂದ ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ಸಂದಿಗ್ಧತೆ ಎದುರಾಗಿರಲಿಲ್ಲ.
ಕೆಂಗಲ್ ಹನುಮಂತಯ್ಯ ಅವರು 1956ರ ಆಗಸ್ಟ್ 15ರಂದು ಧ್ವಜಾರೋಹಣ ನೆರವೇರಿಸಿ 4 ದಿನಗಳಲ್ಲೇ ಅಧಿಕಾರದಿಂದ ನಿರ್ಗಮಿಸಿದ ಉದಾಹರಣೆಯೂ ಇದೆ. ಅದೇ ರೀತಿ ರಾಮಕೃಷ್ಣ ಹೆಗಡೆ ಅವರು ಸ್ವತಂತ್ರ ದಿನಾಚರಣೆಗೂ ಐದು ದಿನ ಮೊದಲೇ 1988ರ ಆಗಸ್ಟ್ 10ರಂದೇ ಅಧಿಕಾರದಿಂದ ಕೆಳಗಿಳಿದಿರುವ ಉದಾಹರಣೆ ಇದೆ.
ಪ್ರಸ್ತುತ ಸಂದರ್ಭದಲ್ಲಿ ನೆರೆ ಪರಿಸ್ಥಿತಿಯಿಂದಾಗಿ ಧ್ವಜಾರೋಹಣದತ್ತ ಯಾರು ಹೆಚ್ಚು ಗಮನ ಹರಿಸಲಿಲ್ಲ. ಆದರೆ, ಇಂತಹ ಘಟನೆಯೊಂದು ಇತಿಹಾಸದಲ್ಲಿ ದಾಖಲಾಗುವಂತಹ ವಾತಾವರಣ ನಿರ್ಮಾಣವಾಗಿದೆ.