ಬೆಂಗಳೂರು, ಆ.13– ಮಾಣಿಕ್ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ 73ನೇ ಸ್ವಾಂತ್ರ್ಯೋತ್ಸವದಲ್ಲಿ ಸುಮಾರು 11,500 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಲಘು ಉಪಹಾರ, ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದಲೂ ಮೈದಾನವನ್ನು ಸಿದ್ದಗೊಳಿಸುವುದು ಹಾಗೂ ಭದ್ರತೆಯ ಪೂರ್ವಭಾವಿ ತಾಲೀಮು ನಡೆಯುತ್ತಿದೆ. ಶಾಮಿಯಾನ, ವೇದಿಕೆ ನಿರ್ಮಾಣ, ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಎಂದರು.
ಆ.15ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸೇನೆಯ ಮೂವರು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಲಾಗುತ್ತದೆ. ನಂತರ ಮುಖ್ಯಮಂತ್ರಿಗಳು ಗೌರವ ರಕ್ಷೆ ಸ್ವೀಕರಿಸಿ ಭಾಷಣ ಮಾಡಲಿದ್ದಾರೆ.
ಜವಹರ್ ನವೋದಯ ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡಲಿದ್ದು, 1250 ಮಕ್ಕಳು ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾಡಗೀತೆ, ರೈತಗೀತೆ, ಭಾರತಾಂಬೆ ಮಡಿಲಿನ ಮಕ್ಕಳು, ಜಲಿಯನ್ ವಾಲಾಭಾಗ್ ಹತ್ಯಾಕಾಂಡ, ಜಿಮ್ನಾಸ್ಟಿಕ್, ಕಲಾರಿಪಯಟ್ ಸೇರಿದಂತೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಐವತ್ತಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳು, 40 ಬ್ಯಾಗೇಜ್ ಸ್ಕ್ಯಾನರ್ಗಳನ್ನು ಮೈದಾನದಲ್ಲಿ ಅಳವಡಿಸಲಾಗಿದೆ. ಸಾಕಷ್ಟು ಸಂಖ್ಯೆಯ ಆ್ಯಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ಅತಿ ಗಣ್ಯವ್ಯಕ್ತಿಗಳಿಗಾಗಿ 1200, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು, ಪತ್ರಕರ್ತರು, ಗಣ್ಯ ವ್ಯಕ್ತಿಗಳಿಗಾಗಿ 750 ಆಸನಗಳು, ಇತರ ಇಲಾಖೆ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಬಿಎಸ್ಎಫ್ ಅಧಿಕಾರಿಗಳಿಗಾಗಿ 2500, ಸಾರ್ವಜನಿಕರಿಗಾಗಿ 700 ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.
ಪಥ ಸಂಚಲನದಲ್ಲಿ 34 ತಂಡಗಳ 1130ಮಂದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಸಿಹಿ ಹಂಚಿಕೆ, ಲಘು ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ವಚ್ಛತೆಗಾಗಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಹಿರಿಯ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.