ನವದೆಹಲಿ: ಕರ್ನಾಟಕ ರಾಜ್ಯ ಕಂಡುಕೇಳರಿಯದ ಪ್ರವಾಹಕ್ಕೆ ಸಿಲುಕಿ, ಸಾವಿರಾರು ಜನರ ಬದುಕನ್ನು ಅತಂತ್ರ ಮಾಡಿದೆ. ಮನೆ-ಮಠ ಕಳೆದುಕೊಂಡ ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದು, ಬದುಕನ್ನು ಮರುಕಲ್ಪಿಸಿಕೊಡುವಂತೆ ಸರ್ಕಾರದ ಕಡೆಗೆ ನೋಡುತ್ತಿದ್ದಾರೆ. ಪ್ರವಾಹದಿಂದಾಗಿ ಅಂದಾಜು 30 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಹೀಗಾಗಿ ರಾಜ್ಯಕ್ಕೆ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದೆ.
ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ರಾಜ್ಯಕ್ಕೆ ಮೋದಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.
ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಭೇಟಿ ನೀಡಿ, ಪ್ರವಾಹಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ಮಾಡಿದ್ದರು. ಸಭೆಯಲ್ಲಿ ರಾಜ್ಯದ ಪ್ರವಾಹದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಭೆಯಲ್ಲಿ ರಾಜ್ಯದವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಷಿ ಕೂಡ ಭಾಗಿಯಾಗಿದ್ದು, ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಿದ್ದಾರೆ.
ಸಭೆಯಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒರಿಸ್ಸಾ, ಗುಜುರಾತ್, ತೆಲಂಗಾಣ, ತಮಿಳುನಾಡು, ಬಿಹಾರ ಮತ್ತು ಈಶಾನ್ಯ ರಾಜ್ಯಗಳ ಮಳೆ ಮತ್ತು ಪ್ರವಾಹ ಪರಿಣಾಮದ ಬಗ್ಗೆ ಅವಲೋಕನ ನಡೆಯಲಿದೆ. ಜೊತೆಗೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಪರಿಹಾರ ನೀಡುವ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ ಸಾಧ್ಯತೆ ಇದೆ.