ಅಂತಿಮ ಪಟ್ಟಿಯನ್ನು ಆ.31ರಂದು ಅಥವಾ ಅದಕ್ಕೂ ಮುಂಚಿತವಾಗಿ ಪ್ರಕಟಿಸಬೇಕು-ಸುಪ್ರೀಂಕೋರ್ಟ್

ನವದೆಹಲಿ, ಆ.13-ಭಾರೀ ವಿವಾದಕ್ಕೆ ಕಾರಣವಾಗಿದ್ದ ಅಸ್ಸಾಂನ ರಾಷ್ಟ್ರೀಯ ಪೌರರ ನೋಂದಣಿ (ನ್ಯಾಷನಲ್ ರಿಜಿಸ್ಟ್ರರ್ ಆಫ್ ಸಿಟಿಜನ್-ಎನ್‍ಆರ್‍ಸಿ) ಕುರಿತು ಇಂದು ಸುಪ್ರೀಂಕೋರ್ಟ್ ಪ್ರಮುಖ ಆದೇಶ ನೀಡಿದೆ.

ಆ.31ರಂದು ಆನ್‍ಲೈನ್‍ನಲ್ಲಿ ಮಾತ್ರ ಅಸ್ಸಾಂನ ಎನ್‍ಆರ್‍ಸಿ ಅಂತಿಮ ಪಟ್ಟಿಯಲ್ಲಿ ಇಲ್ಲದವರ ಹೆಸರುಗಳ ಪಟ್ಟಿಯನ್ನು ಪ್ರಕಟಿಸುವಂತೆ ಸರ್ವೋಚ್ಚ ನ್ಯಾಯಾಲಯ ಇಂದು ಈಶಾನ್ಯ ರಾಜ್ಯದ ಸರ್ಕಾರಕ್ಕೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಅವರನ್ನು ಒಳಗೊಂಡ ಪೀಠವು ಆಧಾರ್ ಅಂಕಿಅಂಶದ ಮಾದರಿಯಲ್ಲೇ ಆಸ್ಸಾಂ ಎನ್‍ಆರ್‍ಸಿ ದತ್ತಾಂಶ ಮಾಹಿತಿ ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉದ್ಭವಿಸಿದ ಕೆಲವು ಕಾನೂನು ಸವಾಲುಗಳ ಆಧಾರದ ಮೇಲೆ ಈಗ ನಡೆಯುತ್ತಿರುವ ಎನ್‍ಆರ್‍ಸಿ ಪ್ರಕ್ರಿಯೆಯನ್ನು ಮರು ಆರಂಭಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂಬುದನ್ನು ಸಹ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಅಸ್ಸಾಂ ಎನ್‍ಆರ್‍ಸಿಯ ಅಂತಿಮ ಪಟ್ಟಿಯನ್ನು ಆ.31ರಂದು ಅಥವಾ ಅದಕ್ಕೂ ಮುಂಚಿತವಾಗಿ ಪ್ರಕಟಿಸಬೇಕೆಂದು ಈ ಹಿಂದೆ ಸರ್ವೋನ್ನತ ನ್ಯಾಯಾಲಯ ಆದೇಶಿಸಿತ್ತು.

ಈಶಾನ್ಯ ಪ್ರಾಂತ್ಯದ ಅಷ್ಟ್ ಸಹೋದರಿ ರಾಜ್ಯಗಳಲ್ಲಿ ಒಂದಾಗಿ ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಎನ್‍ಆರ್‍ಸಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ