ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ‘ಮ್ಯಾನ್ ವರ್ಸಸ್ ವೈಲ್ಡ್‘ ಕಾರ್ಯಕ್ರಮದ ಎಪಿಸೋಡ್ ನಿನ್ನೆ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಿದೆ. ವನ್ಯಪ್ರಾಣಿಗಳ ಜೊತೆಗೆ ಸಾಗುತ್ತಾ, ತಣ್ಣಗೆ ಕೊರೆವ ನೀರಿನಲ್ಲಿ ಬೋಟಿಂಗ್ ಮಾಡುತ್ತಾ ಬೇರ್ ಗ್ರಿಲ್ಸ್ ಜೊತೆಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಮೋದಿ ಹಂಚಿಕೊಂಡಿದ್ದಾರೆ.
ಬೇರ್ ಗ್ರಿಲ್ಸ್ ಜೊತೆಗೆ ತಮ್ಮ ಹವ್ಯಾಸಗಳು, ಬಾಲ್ಯವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮಗೆ ಪ್ರಧಾನಿಯಾಗಬೇಕೆಂಬ ಗುರಿಯಾಗಲಿ, ಆಸೆಯಾಗಲಿ ಇರಲಿಲ್ಲ. ದೇಶವನ್ನು ಅಭಿವೃದ್ಧಿಪಡಿಸಬೇಕೆಂಬುದಷ್ಟೇ ದೊಡ್ಡ ಗುರಿಯಾಗಿತ್ತು. ಸದಾ ಸಕಾರಾತ್ಮಕ ಯೋಚನೆಗಳನ್ನು ಮಾಡುವುದು ನನ್ನ ಅಭ್ಯಾಸ. ಹಾಗಾಗಿ, ಆತಂಕ, ನೆಗಟಿವ್ ಮನಸ್ಥಿತಿಯ ಬಗ್ಗೆ ಯಾವುದೇ ಅನುಭವವಾಗಿಲ್ಲ ಎಂದು ಹೇಳಿದ್ದಾರೆ.
ಈ ಶೋನಲ್ಲಿ ಭಾಗವಹಿಸುವ ಸಲುವಾಗಿ ನಾನು ನನ್ನ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ಇದು ನನ್ನ ರಜಾ ಅವಧಿ ಎಂದು ಪರಿಗಣಿಸುವುದಾದರೆ 18 ವರ್ಷಗಳ ನಂತರ ಮೊದಲ ಬಾರಿಗೆ ನನಗೆ ಸಿಕ್ಕ ಅವಕಾಶವಿದು. ಯಾಕೆಂದರೆ 18 ವರ್ಷಗಳಿಂದ ನಾನು ಎಂದೂ ರಜೆ ತೆಗೆದುಕೊಳ್ಳದೆ ನನ್ನ ಕೆಲಸ ಮಾಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಆಡಳಿತ ನಡೆಸಿದ್ದೆ. ಅದು ನನ್ನ ರಾಜಕೀಯ ಜೀವನದ ಹೊಸ ಬಗೆಯ ಪ್ರಯಾಣವಾಗಿತ್ತು. ಗುಜರಾತ್ನಲ್ಲಿ ನಾನು ಮಾಡಿದ ರೀತಿಯ ಕೆಲಸವನ್ನು ದೇಶಮಟ್ಟದಲ್ಲೂ ಮಾಡಬೇಕೆಂದು ಪಕ್ಷ ಬಯಸಿತು. ಹಾಗಾಗಿ, 5 ವರ್ಷದಿಂದ ದೇಶಕ್ಕಾಗಿ ಸೇವೆ ಮಾಡುತ್ತಿದ್ದೇನೆ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿಯಿದೆ ಎಂದು ಮೋದಿ ಬೇರ್ ಗ್ರಿಲ್ಸ್ ಪ್ರಶ್ನೆಗೆ ಉತ್ತರಿಸಿದ್ದಾರೆ.
ಪರಿಸರ ಸಂರಕ್ಷಣೆ ಬಗ್ಗೆ ಬಾಲ್ಯದಿಂದಲೇ ಆಸಕ್ತಿಯಿತ್ತು ಎಂದು ಗ್ರಿಲ್ಸ್ಗೆ ಮಾಹಿತಿ ನೀಡಿರುವ ಮೋದಿ, ನಾವು ಬಡವರಾಗಿದ್ದರಿಂದ ನಮ್ಮ ಸಂಬಂಧಿಯೊಬ್ಬರು ಕಟ್ಟಿಗೆ ಕಡಿದು ವ್ಯಾಪಾರ ಮಾಡುತ್ತಿದ್ದರು. ಆದರೆ, ನಮ್ಮ ಅಜ್ಜಿ ನಾವು ಹಸಿವಿನಿಂದಿದ್ದರೂ ಮರಗಳನ್ನು ಕಡಿಯಬಾರದು ಎಂದು ತಾಕೀತು ಮಾಡಿದ್ದರು. ಅವರೇ ನಮಗೆ ಪರಿಸರದ ಬಗ್ಗೆ ಪ್ರೀತಿ ಮೂಡಿಸಿದ್ದು ಎಂದು ಹೇಳಿದ್ದಾರೆ.
ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನ ಕಾಡಿನಲ್ಲಿ ಸಂಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬೇರ್ ಗ್ರಿಲ್ಸ್ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರ ಉತ್ಸಾಹ ಮತ್ತು ಆಸಕ್ತಿಯನ್ನು ಕೊಂಡಾಡಿದ್ದಾರೆ. ಇದಕ್ಕೂ ಮೊದಲು ಈ ಶೋನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಪಾಲ್ಗೊಂಡಿದ್ದರು.
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ಡಿಸ್ಕವರಿಯ 12 ಚಾನಲ್ಗಳಲ್ಲಿ 180 ದೇಶಗಳಲ್ಲೂ ಬಿತ್ತರವಾಗಿದೆ. ‘ಮ್ಯಾನ್ ವರ್ಸಸ್ ವೈಲ್ಡ್’ ಪ್ರಚಾರದ ದೃಶ್ಯವನ್ನು (ಟೀಸರ್) ಕೇಂದ್ರ ಪ್ರವಾಸೋದ್ಯಮ ಇಲಾಖೆ ‘ಇನ್ಕ್ರೆಡಿಬಲ್ ಇಂಡಿಯಾ’ ವೆಬ್ಸೈಟ್ನಲ್ಲಿ ಹಾಕಿತ್ತು.