ಪಲ್ಗರ್, ಆ.13-ಭಾರೀ ಮಳೆ ಮತ್ತು ಪ್ರವಾಹದಿಂದ ನಲುಗಿದ್ದ ಮಹಾರಾಷ್ಟ್ರದ ಪಲ್ಗರ್ ಜಿಲ್ಲೆಯ ಕೆಲವೆಡೆ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.2ರಷ್ಟಿತ್ತು. ಲಘು ಭೂಕಂಪನದಿಂದ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದ ವರದಿಗಳಿಲ್ಲ. ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ.
ಇಂದು 5.38ರ ನಸುಕಿನಲ್ಲಿ ಲಘು ಭೂಕಂಪ ಸಂಭವಿಸಿದೆ. ಧಹನು ತಾಲೂಕಿನ ದುಂಡಲ್ವಾಡಿ ಗ್ರಾಮದಲ್ಲಿ 10 ಕಿ.ಮೀ. ಭೂ ಗರ್ಭದ ಅಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಕದಂ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ನಿಂದ ಪಲ್ಗರ್ ಜಿಲ್ಲೆಯ ದಹನು ಪ್ರದೇಶದಲ್ಲಿ ಆಗಾಗ ಲಘು ಭೂಕಂಪನಗಳು ಸಂಭವಿಸುತ್ತಲೇ ಇವೆ. ಈ ಜಿಲ್ಲೆಯಲ್ಲಿ ಕಳೆದ ವಾರ ಭಾರೀ ಮಳೆ ಮತ್ತು ಪ್ರವಾಹದಿಂದ ಸಾವು-ನೋವು ಸಂಭವಿಸಿತ್ತು. ಇದರ ಬೆನ್ನಲ್ಲೇ ಭೂಮಿ ಕಂಪಿಸಿರುವುದರಿಂದ ನಾಗರಿಕರು ಭಯಭೀತರಾಗಿದ್ದಾರೆ.