ಬೆಂಗಳೂರು, ಆ.12- ಇದೇ ಶುಕ್ರವಾರದಂದು ನವದೆಹಲಿಗೆ ತೆರಳುತ್ತಿದ್ದು, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಪರಿಹರಿಸಲು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಷಾ ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಪಡೆದಿದ್ದಾರೆ ಎಂದರು.
ನಾನು ಶುಕ್ರವಾರ ನವದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವೆ. ರಾಜ್ಯದಲ್ಲಿ ಪ್ರವಾಹದಿಂದಾಗಿ ಉಂಟಾಗಿರುವ ಸಾವು-ನೋವು, ನಷ್ಟ ಎಲ್ಲವನ್ನೂ ವಿವರಿಸಲಿದ್ದೇನೆ. ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪರಿಹಾರ ನೀಡುವಂತೆ ಕೋರುವುದಾಗಿ ತಿಳಿಸಿದರು.
ಸದ್ಯದ ಅಂದಾಜಿನ ಪ್ರಕಾರ ಪ್ರವಾಹ ಮತ್ತು ಭಾರೀ ಮಳೆ ಸುರಿದ ಪರಿಣಾಮ 40 ರಿಂದ 50 ಕೋಟಿಯಷ್ಟು ನಷ್ಟ ಸಂಭವಿಸಿದೆ. ಪರಿಹಾರ ಕಾರ್ಯ ಕೈಗೊಳ್ಳಲು ತತ್‍ಕ್ಷಣವೇ 3 ಸಾವಿರ ಕೋಟಿ ನೀಡಬೇಕೆಂದು ಮನವಿ ಮಾಡಿದ್ದೇವೆ. ಕೇಂದ್ರದಿಂದ ನಮಗೆ ನೆರವು ಸಿಗುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಧನ್ಯವಾದ: ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಬೆಂಬಲ ಕೊಟ್ಟಿದ್ದಾರೆ. ಅವರಿಗೆಲ್ಲರಿಗೂ ನಾನು ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಸಂತ್ರಸ್ತರಿಗೆ ಅಪಾರ ಪ್ರಮಾಣದಲ್ಲಿ ಪರಿಹಾರ ಸಾಮಗ್ರಿಗಳು ಬರುತ್ತಿವೆ. ಪ್ರತಿಯೊಂದನ್ನೂ ಸಂಗ್ರಹಿಸಿ ಸಂತ್ರಸ್ತರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕೆಂದು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಎಲ್ಲಿಯೂ ಲೋಪದೋಷವಾಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿದ್ದಾರೆ ಎಂದು ಬಿಎಸ್‍ವೈ ತಿಳಿಸಿದರು.
ಇಂದು ನೆರೆ ಪೀಡಿತ ದಕ್ಷಿಣ ಕನ್ನಡ, ಮೈಸೂರು ಹಾಗೂ ನಂಜನಗೂಡು ಭಾಗಗಳಲ್ಲಿ ಪರಿಶೀಲನೆ ಮಾಡುತ್ತೇನೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಂತಹ ಕಡೆ ರಸ್ತೆಗಳಲ್ಲಿ ಪ್ರಯಾಣಿಸಿ ಸಂತ್ರಸ್ತರನ್ನು ಭೇಟಿಯಾಗುವೆ. ಕೆಲವು ಕಡೆ ವೈಮಾನಿಕ ಸಮೀಕ್ಷೆ ನಡೆಸುತ್ತೇನೆ. ನಾಳೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದರು.