![northkarnataka](http://kannada.vartamitra.com/wp-content/uploads/2019/08/northkarnataka-678x339.jpg)
ಬೆಂಗಳೂರು, ಆ.12- ತಮ್ಮ ಜೀವವನ್ನೂ ಲೆಕ್ಕಿಸದೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಹಲವಾರು ಮಂದಿಯನ್ನು ರಕ್ಷಿಸಿರುವ ಭಾರತೀಯ ಸೇನಾ ಯೋಧರು ಸಂತ್ರಸ್ತರ ಪಾಲಿಗೆ ದೈವಿ ಸ್ವರೂಪರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ರಕ್ಷಿಸಲ್ಪಟ್ಟ ಮಹಿಳೆಯೊಬ್ಬರು ತಮ್ಮನ್ನು ಕಾಪಾಡಿದ ಯೋಧರ ಕಾಲಿಗೆ ಹೃದಯಸ್ಪರ್ಶಿ ನಮಸ್ಕಾರ ಹಾಕಿದ ದೃಶ್ಯ ಸೇನೆಯ ಕಾರ್ಯಾಚರಣೆಗೆ ಹಿಡಿದ ಕೈಗನ್ನಡಿಯಂತಿದೆ.
ಪ್ರವಾಹದಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ವೀರಯೋಧನೊಬ್ಬ ಹೆಗಲ ಮೇಲೆ ಕೂರಿಸಿಕೊಂಡು ದಡ ಸೇರಿಸಿದ ಪ್ರಕರಣ, ಗುಜರಾತ್ನ ಯೋಧನೊಬ್ಬ ಎದೆಮಟ್ಟದ ನೀರಿನಲ್ಲಿ ಎರಡು ಮಕ್ಕಳನ್ನು ಹೆಗಲ ಮೇಲಿಟ್ಟುಕೊಂಡು ಸುಮಾರು ಒಂದೂವರೆ ಕಿಲೋ ಮೀಟರ್ ನೀರಿನಲ್ಲಿ ಸಾಗಿಬಂದ ದೃಶ್ಯ ಸಂತ್ರಸ್ತರಲ್ಲದೆ ಇಡೀ ದೇಶದ ಜನರ ಗಮನ ಸೆಳೆದಿದೆ.
ಕೊರೆಯುವ ಮಂಜಿನಲ್ಲೂ ಕರ್ತವ್ಯ ನಿರ್ವಹಿಸುತ್ತ ದೇಶದ ಗಡಿ ಕಾಯುವ ಯೋಧರ ಕಾರ್ಯವೈಖರಿ ಬಗ್ಗೆ ಕೇಳಿದ್ದ ಸಾಮಾನ್ಯ ಜನರಿಗೆ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಲ್ಲಿ ಅವರ ಕಾರ್ಯವೈಖರಿಯ ದರ್ಶನವಾಗಿತ್ತು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇನಾ ಯೋಧರು ಮೆರೆದ ಮಾನವೀಯತೆ, ಸಂತ್ರಸ್ತರೊಂದಿಗೆ ಅವರು ನಡೆದುಕೊಂಡ ರೀತಿ, ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ವೃದ್ಧರು, ಮಕ್ಕಳನ್ನು ತಮ್ಮ ಮನೆಯವರಂತೆ ಜೋಪಾನವಾಗಿ ಸುರಕ್ಷಿತ ಸ್ಥಳ ಸೇರಿಸಿದ ರೀತಿ ಅವಿಸ್ಮರಣೀಯ.
ದುಃಖದ ಸನ್ನಿವೇಶದಲ್ಲೂ ಸಂರಕ್ಷಿಸಲ್ಪಟ್ಟ ಹಸುಗೂಸನ್ನು ಸಂತೈಸಿದ ಸೇನಾಯೋಧರ ಮಾನವೀಯತೆ ಗುಣ ಅವರನ್ನು ದೈವಿ ಸ್ವರೂಪರನ್ನಾಗಿಸಿದೆ.
ಕಾಣದ ದೇವರಿಗಿಂತ ತಮ್ಮ ಕಷ್ಟ ಕಾಲದಲ್ಲಿ ತಮ್ಮ ಜೀವವನ್ನೇ ಮುಡುಪಾಗಿಟ್ಟು 900ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿರುವ ಭಾರತೀಯ ಸೇನಾಯೋಧರು ಸಂತ್ರಸ್ತರ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ.
ರಕ್ಷಿಸಲ್ಪಟ್ಟ ಮಹಿಳೆಯೊಬ್ಬರು ಇಬ್ಬರು ಸೇನಾಯೋಧರ ಕಾಲಿಗೆ ಹೃದಯ ಸ್ಪರ್ಶಿಯಾಗಿ ನಮಸ್ಕರಿಸುವ ದೃಶ್ಯ ವೈರಲ್ ಆಗುತ್ತಿದ್ದಂತೆ ಸೇನಾಯೋಧರ ಮೇಲಿದ್ದ ಗೌರವ ನೂರು ಪಟ್ಟು ಹೆಚ್ಚಾಗಿದೆ.
ತಮ್ಮನ್ನು ದೇವರ ಸ್ವರೂಪರನ್ನಾಗಿ ಜನ ಕಾಣುತ್ತಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದ ಯೋಧರು ಕಷ್ಟದಲ್ಲಿರುವವರನ್ನು ಸಂರಕ್ಷಿಸುವುದೇ ತಮ್ಮ ಕಾಯಕವೆಂದು ಭಾವಿಸಿ ಕರ್ತವ್ಯದಲ್ಲಿ ನಿರತರಾಗಿರುವುದನ್ನು ಗಮನಿಸಿದರೆ ಎಂತಹವರಿಗೂ ಅವರು ದೈವಿ ಸ್ವರೂಪರಾಗಿ ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.