ಹಾಸನ, ಆ. 12- ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ಭಾಗಗಳಲ್ಲಿ ನಿನ್ನೆ ವೈಮಾನಿಕ ಸಮೀಕ್ಷೆ ನಡೆಸಿದರೂ ಪರಿಹಾರಧನ ಘೋಷಣೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರವಾಹದ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ, ರಾಜ್ಯದಲ್ಲಿ ಸುಮಾರು 4-5ಲಕ್ಷ ಕುಟುಂಬಗಳು ಮನೆ ಬಿಟ್ಟು ಉಟ್ಟ ಬಟ್ಟೆಯಲ್ಲೇ ಹೊರಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ನೆರವಿನ ಬಗ್ಗೆ ಪ್ರಕಟ ಮಾಡಬೇಕಿತ್ತು. ಯಾವುದೇ ಭರವಸೆಯನ್ನು ನೀಡದೇ ವಾಪಸ್ ಹೋಗಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ತಕ್ಷಣ 4ರಿಂದ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರ ನೆರವಿನ ಭರವಸೆ ನೀಡಿದರೆ ಸಂತ್ರಸ್ತರ ಜನರಿಗೂ ಸಾಂತ್ವನ ಸಿಕ್ಕಂತಾಗುತ್ತದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ಒಂದು ತಿಂಗಳು ಬೇಕಾಗಬಹುದು ಅಷ್ಟು ದೊಡ್ಡ ಪ್ರಮಾಣದಲ್ಲಿ ಈ ಭಾರಿ ಅಷ್ಟು ಅನಾಹುತ ಉಂಟಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಭಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದೆ.
ಅದೇ ರೀತಿ ಕೊಡಗು, ಚಿಕ್ಕಮಗಳೂರು, ವಿರಾಜಪೇಟೆಯಲ್ಲಿ ಪ್ರವಾಹ ಉಂಟಾಗಿದೆ. ತಮ್ಮ ಅನಾರೋಗ್ಯದ ನಡುವೆಯು ನೆರೆಪೀಡಿತ ಸಂತ್ರಸ್ತರ ನೆರವಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಪ್ರವಾಸ ಮಾಡಲಾಗುವುದು ಎಂದರು.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಮತ್ತು ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ. ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗದೆ ಅಧಿಕಾರಿಗಳು ಶಾಸಕರ ಮಾತನ್ನು ಕೇಳುತ್ತಾರೋ ಇಲ್ಲವೋ ಎಂಬ ಅನುಮಾನ ಉಂಟಾಗಿದೆ.
ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರವಾದರೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ದೆಹಲಿಯಲ್ಲಿ ಮುಖ್ಯಮಂತ್ರಿಗೆ ಎಷ್ಟರ ಮಟ್ಟಿಗೆ ಗೌರವ ಸಿಗುತ್ತದೋ ಗೊತ್ತಿಲ್ಲ. ಆ. 16ರಂದು ಸಂಪುಟ ವಿಸ್ತರಣೆ ಅಂತಾರೆ.. ಯಾವಾಗ ಮಾಡ್ತೋರೊ ಗೊತ್ತಿಲ್ಲ ಎಂದು ಆಗ್ರಹಿಸಿದರು.
ವಿ.ಪಕ್ಷ ನಾಯಕರ ಸಭೆಗೆ ಆಗ್ರಹ:
ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ , ಪ್ರವಾಹ ಪರಿಸ್ಥಿತಿ ಕುರಿತಂತೆ ಸಮಾಲೋಚನೆ ನಡೆಸಲು ವಿರೋಧ ಪಕ್ಷಗಳ ಮುಖಂಡರ ಸಭೆ ಕರೆಯಬೇಕು. ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕಿದೆ. ಈ ಸರ್ಕಾರ ಟೆಕ್ಅಫ್ ಆಗಿದೆ ಎಂಬುದನ್ನು ಮುಖ್ಯಮಂತ್ರಿಗಳನ್ನು ಕೇಳಬೇಕು. ನಮ್ಮ ಸರ್ಕಾರದ ಹಾದಿಯಲ್ಲಿ ಆಗಿರುವ ಕೆಲಸಗಳನ್ನು ಕಡತ ತೆಗೆದು ನೋಡಲಿ ಎಂದು ಹೇಳಿದರು.
ರೈತರ ಬೆಳೆ ಸಾಲಮನ್ನಾಕೆ ಒದಗಿಸಿರುವ ಅನುದಾನವನ್ನು ಪ್ರಕೃತಿ ವಿಕೋಪಕ್ಕೆ ಬದಲಾವಣೆ ಮಾಡಿಕೊಳ್ಳಲಿ, ತಮ್ಮ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಕಚೇರಿಯಲ್ಲಿ ಮಾರುಕಟ್ಟೆ ಮಾಡಿರಲಿಲ್ಲ. ತಮ್ಮ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ಅಧಿಕಾರಿಗಳ ಕೆಲಸದಿಂದ ಸರ್ಕಾರ ಮರ್ಯಾದೆ ಉಳಿದಿದೆ ಎಂದರು.
ಅಧಿಕಾರಿಗಳ ಸ್ಥಳ ನಿಯೋಜಿನೆ ಬಿಡ್ಡಿಂಗನ್ನು ಇಂತಹ ಸಂದರ್ಭದಲ್ಲಿ ಮುಂದಕ್ಕೆ ಹಾಕಿ ಎಂದು ವ್ಯಂಗ್ಯವಾಡಿದರು.