ಬೆಂಗಳೂರು, ಆ. 12-ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಆರಂಭಿಸಿದೆ.
ಹಗಲು ವೇಳೆಯಲ್ಲಿ ಶಿರಾಡಿಘಾಟ್ ಮಾರ್ಗದ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಸೇವೆ ಒದಗಿಸಲಿದ್ದು, ರಾತ್ರಿ ವೇಳೆ ಮಡಿಕೇರಿ ಮೂಲಕ ಬಸ್ ಸೇವೆ ಕಲ್ಪಿಸುವುದಾಗಿ ಕೆಎಸ್ಆರ್ಟಿಸಿ ತಿಳಿಸಿದೆ.
ಹೊರರಾಜ್ಯಗಳಿಗೆ ಕಾಯ್ದಿರಿಸಿದ 47 ಹಾಗೂ 6 ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಿಂದ ಹೊರರಾಜ್ಯಗಳ ಬಸ್ ಸೇವೆ ಒದಗಿಸಲು ಯೋಚಿಸಲಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಮಂಡಗದ್ದೆ ಮೂಲಕ ಉಡುಪಿ ಕಡೆಗೆ ಬಸ್ ಸಂಚಾರ ಪುನರ್ ಆರಂಭವಾಗಿದೆ. ಆದರೆ ಕಪಿಲ ನದಿಯ ಪ್ರವಾಹದಿಂದ ಮೈಸೂರು, ಉಲ್ಲಹಳ್ಳಿ, ನಂಜನಗೂಡು ಮಾರ್ಗ, ನಂಜನಗೂಡು ಮೈಸೂರು, ಮೈಸೂರು-ಸುತ್ತೂರು ಮಾರ್ಗದ ಬಸ್ ಸೇವೆಗಳು ಸ್ಥಗಿತವಾಗಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಮೈಸೂರು, ಕುಶಾಲನಗರ, ಹುಣಸೂರು ಮಾರ್ಗದ ರಸ್ತೆ ತೆರವಾಗಿದೆ. ಹಾಗೆಯೇ ಮೈಸೂರು, ಹೆಗ್ಗಡದೇವನಕೋಟೆ ಮಾರ್ಗವು ಸಂಚಾರಕ್ಕೆ ತೆರವುಗೊಂಡಿದೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.