ಬೆಂಗಳೂರು, ಆ.12- ರಾಜ್ಯದಲ್ಲಿ ಉಂಟಾದ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಈವರೆಗೂ 17 ಜಿಲ್ಲೆಗಳಲ್ಲಿ 42 ಮಂದಿ ಸಾವನ್ನಪ್ಪಿದ್ದು, 4 ಲಕ್ಷಕ್ಕೂ ಅಧಿಕ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ.
ಅತಿ ಹೆಚ್ಚು ಮಳೆ ಸುರಿದ ಬೆಳಗಾವಿಯಲ್ಲಿ 12 ಮಂದಿ, ಬಾಗಲಕೋಟೆ 2, ಉತ್ತರಕನ್ನಡ 4, ದಕ್ಷಿಣ ಕನ್ನಡ 2, ಶಿವಮೊಗ್ಗ 3, ಉಡುಪಿ 2, ಕೊಡಗು 7, ಚಿಕ್ಕಮಗಳೂರು 5, ಮೈಸೂರು 2 ಹಾಗೂ ಧಾರವಾಡದಲ್ಲಿ ಮೂವರು ಸೇರಿದಂತೆ 42 ಮಂದಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
12 ಮಂದಿ ಈವರೆಗೂ ಕಣ್ಮರೆಯಾಗಿದ್ದು, ಇವರ ಪತ್ತೆಗಾಗಿ ಶೋಧಕಾರ್ಯ ಮುಂದುವರಿಸಲಾಗಿದೆ.
ಪ್ರವಾಹದಿಂದಾಗಿ ಈ ಬಾರಿ 548 ಪ್ರಾಣಿಗಳು ಸಾವನ್ನಪ್ಪಿವೆ. ಬೆಳಗಾವಿಯಲ್ಲಿ 133, ಧಾರವಾಡದಲ್ಲಿ 187, ಹಾವೇರಿಯಲ್ಲಿ 109, ಉತ್ತರ ಕನ್ನಡದಲ್ಲಿ 31, ಶಿವಮೊಗ್ಗದಲ್ಲಿ 24 ಸೇರಿದಂತೆ 548 ಜಾನುವಾರುಗಳು ಸಾವನ್ನಪ್ಪಿವೆ.
ರಾಜ್ಯದ ಒಟ್ಟು 86 ತಾಲ್ಲೂಕುಗಳನ್ನು ಪ್ರವಾಹಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಬೆಳಗಾವಿಯ 10, ಬಾಗಲಕೋಟೆ 6, ಬಿಜಾಪುರ 4, ರಾಯಚೂರು 3, ಯಾದಗಿರಿ 3, ಉತ್ತರ ಕನ್ನಡ 11, ದಕ್ಷಿಣ ಕನ್ನಡ 5, ಶಿವಮೊಗ್ಗ 7, ಉಡುಪಿ 3, ಕೊಡಗು 3, ಚಿಕ್ಕಮಗಳೂರು 4, ಹಾಸನ 8, ಗದಗ 3, ಮೈಸೂರು 3, ಧಾರವಾಡ 5, ಹಾವೇರಿ 6 ಹಾಗೂ ಕಲಬುರಗಿಯ 2 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.
ಪ್ರವಾಹದಿಂದಾಗಿ 2694 ಗ್ರಾಮಗಳು ಕೊಚ್ಚಿಹೋಗಿವೆ. ಇದರಲ್ಲಿ ಅತಿಹೆಚ್ಚು ಚಿಕ್ಕಮಗಳೂರಿನ 665, ಶಿವಮೊಗ್ಗದ 556, ಬೆಳಗಾವಿಯ 365, ಹಾಸನ 665, ಬಾಗಲಕೋಟೆ 173, ಉತ್ತರ ಕನ್ನಡ 216, ಗದಗ 175, ಹಾವೇರಿ 138 ಸೇರಿದಂತೆ 2694 ಗ್ರಾಮಗಳು ಮಳೆ ಮತ್ತು ಪ್ರವಾಹಕ್ಕೆ ಆಹುತಿಯಾಗಿವೆ.
17 ಜಿಲ್ಲೆಗಳಲ್ಲಿ ಈವರೆಗೂ 5,81,897 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ 3,45,424, ಬಾಗಲಕೋಟೆ 1,00,392, ಗದಗ 51,171, ಧಾರವಾಡ 35,680, ಹಾವೇರಿ 14,350 ಸೇರಿದಂತೆ ಸಂತ್ರಸ್ತರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ತೆರವು ಮಾಡಿದೆ.
17 ಜಿಲ್ಲೆಗಳಲ್ಲಿ ವಿವಿಧ ಕಡೆ 1181 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗಾವಿ 436, ಬಾಗಲಕೋಟೆ 203, ಹಾವೇರಿ 137, ಉತ್ತರ ಕನ್ನಡ 93 ಸೇರಿದಂತೆ ಮತ್ತಿತರ ಕಡೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
3,32,629 ಮಂದಿಗೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ. 50,595 ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದ್ದು, 32,305 ಪ್ರಾಣಿಗಳಿಗೆ ಪರಿಹಾರ ಕೇಂದ್ರದಲ್ಲಿ ಅಗತ್ಯ ನೆರವು ನೀಡಲಾಗುತ್ತದೆ. 4,21,514 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
ಇದರಲ್ಲಿ ಬೆಳಗಾವಿ ಅತಿ ಹೆಚ್ಚು ಎಂದರೆ 1,57,301 ಹೆಕ್ಟೇರ್, ಧಾರವಾಡ 1,07,077, ಹಾವೇರಿ 59,773 ಹೆಕ್ಟೇರ್ ಸೇರಿದಂತೆ ಒಟ್ಟು 4,21,514 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
ಪ್ರವಾಹದಿಂದಾಗಿ ಈವರೆಗೂ 31,800 ಮನೆಗಳು ಹಾನಿಗೊಳಗಾಗಿವೆ. ಬೆಳಗಾವಿ 9748, ಹಾವೇರಿ 6566, ಧಾರವಾಡ 7331, ಉತ್ತರ ಕನ್ನಡ 2072 ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಮನೆಗಳು ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.