ಬೆಂಗಳೂರು, ಆ.12-ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಯ ವಿಕೋಪವೆಂದು ಘೋಷಣೆ ಮಾಡಿ ಮಧ್ಯಂತರ ಪರಿಹಾರವಾಗಿ 5ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಕಾವೇರಿ ಜಲಾನಯನ ಭಾಗದಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿ ಉಂಟಾಗಿ ಹಿಂದೆಂದೂ ಕಂಡರಿಯದಂತಹ ಹಾನಿ ಉಂಟಾಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಪುಟಗಳ ಪತ್ರ ಬರೆಯಲಾಗಿದ್ದು, ತಕ್ಷಣವೇ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿ ಬಗ್ಗೆ ಅಧ್ಯಯನ ನಡೆಸಲು ಉನ್ನತ ಮಟ್ಟದ ಕೇಂದ್ರ ತಂಡವನ್ನು ಕಳುಹಿಸಬೇಕೆಂದು ಪತ್ರದಲ್ಲಿ ಕೋರಿರುವುದಾಗಿ ತಿಳಿಸಿದರು.
ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ 42 ಮಂದಿ ಮೃತಪಟ್ಟಿದ್ದು, 50 ಮಂದಿ ಕಾಣೆಯಾಗಿದ್ದಾರೆ. 17 ಜಿಲ್ಲೆಗಳ 80 ತಾಲ್ಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 3.15 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. 1702 ಹಳ್ಳಿಗಳು ಹಾನಿಗೀಡಾಗಿದ್ದು, 2,18,494 ಮನೆಗಳು ಮುಳುಗಡೆಯಾಗಿವೆ. 4.15 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಬೆಳಗಾವಿ, ಹಾಸನ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ನೋವನ್ನು ಆಲಿಸಿದ್ದಾರೆ. ಜೆಡಿಎಸ್ ಯುವ ಜನತಾದಳದ ಅಧ್ಯಕ್ಷ ನಿಖಿಲ್‍ಕುಮಾರಸ್ವಾಮಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಕಳುಹಿಸಲಾಗಿದೆ ಎಂದರು.
ಸಂತ್ರಸ್ತರಿಗೆ 2 ಲಕ್ಷ ದೇಣಿಗೆ:
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಸಂತ್ರಸ್ತರ ನೆರವಿಗಾಗಿ 2 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದಾಗಿ ಗೌಡರು ಹೇಳಿದರು.
ಈಗಾಗಲೇ ಕೇಂದ್ರ ಹಣಕಾಸು ಹಾಗೂ ಗೃಹ ಸಚಿವರು ಬೆಳಗಾವಿ ಭಾಗದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಬೇಕಿತ್ತು ಎಂದು ದೇವೇಗೌಡರು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧ್ಯವಾದ ಮಟ್ಟಿಗೆ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಹೇಮಾವತಿ, ಕಬಿನಿ, ಕೆಆರ್‍ಎಸ್ ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗಳಿಗೆ ಬಿಟ್ಟಿದ್ದು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಭಾರೀ ಮಳೆ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಿಗೆ ಅತ್ಯಧಿಕ ಪ್ರಮಾಣದ ನೀರು ಹರಿದು ಬಂದು ಪ್ರವಾಹ ಪರಿಸ್ಥಿತಿ ಉಂಟಾಯಿತು ಎಂದು ಅವರು ತಿಳಿಸಿದರು.
ಪ್ರವಾಹ ಪರಿಸ್ಥಿತಿ ಇಳಿಮುಖವಾದ ನಂತರ ಪ್ರವಾಹ ಕೈಗೊಳ್ಳಲಿದ್ದು, ಎಲ್ಲೆಲ್ಲಿ ಏನೇನು ಸಮಸ್ಯೆ ಆಗಿದೆ ಎಂಬುದನ್ನು ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ಗೌಡರು ಹೇಳಿದರು.
ರಸ್ತೆ, ಸೇತುವೆ, ಮನೆ ಹಾಗೂ ಬೆಳೆಗಳು ಎಷ್ಟೆಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದರ ಬಗ್ಗೆ ಪ್ರವಾಸ ಸಂದರ್ಭದಲ್ಲಿ ಪರಿಶೀಲನೆ ಮಾಡಲಾಗುವುದು.
ಪ್ರವಾಹದ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದ್ಯಕ್ಕೆ ಮೂರು ಸಾವಿರ ಕೋಟಿ ನೆರವನ್ನು ಕೇಂದ್ರಕ್ಕೆ ಕೇಳಿದ್ದಾರೆ. ನನ್ನ ಅನುಭವದ ಆಧಾರದ ಮೇಲೆ ಮಧ್ಯಂತರ ಪರಿಹಾರವಾಗಿ 5 ಸಾವಿರ ಕೋಟಿ ನೀಡುವಂತೆ ಕೇಳಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ನಂತರ ಪ್ರಧಾನಿ ಅವರನ್ನು ಖುದ್ದು ಭೇಟಿ ಮಾಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.