ಬೀಜಿಂಗ್, ಆ.12- ಪೂರ್ವ ಚೀನಾ ಮೇಲೆ ಬಂದಪ್ಪಳಿಸಿದ ವಿನಾಶಕಾರಿ ಲೆಖಿಮಾ ಚಂಡಮಾರುತದ ರೌದ್ರಾವತಾರಕ್ಕೆ ಈವರೆಗೆ 46 ಮಂದಿ ಬಲಿಯಾಗಿದ್ದಾರೆ.
ಭಾರೀ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಅನೇಕರು ಗಾಯಗೊಂಡಿದ್ದು , ಕೆಲವರು ಕಣ್ಮರೆಯಾಗಿದ್ದಾರೆ.
ಶನಿವಾರ ಬೆಳಗ್ಗೆ ಪೆನ್ಸಿಂಗ್ ನಗರದ ಮೇಲೆ ಲೆಖಿಮಾ ಚಂಡಮಾರುತ ಎರಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಸಾವು-ನೋವಿಗೆ ಕಾರಣವಾಯಿತು.
ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಯಿಂದಾಗಿ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿದ್ದು , ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯೊಂದಿಗೆ ಕರಾವಳಿ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು , ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಚಂಡ ವೇಗದಲ್ಲಿ ಮುನ್ನುಗ್ಗುತ್ತಿರುವ ಬಿರುಗಾಳಿ ಪೆನ್ಸಿಂಗ್ನ ಸುತ್ತಮುತ್ತಲ ಪ್ರದೇಶಗಳ ಮೇಲೂ ಆರ್ಭಟ ಮುಂದುವರೆಸಿದ್ದು, ಅಲ್ಲಿಯೂ ಸಾವು ನೋವಿನ ವರದಿಯಾಗಿದೆ.
ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.