ಕೆಆರ್ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರು ಬಿಡುಗಡೆ-ನದಿಪಾತ್ರದ ಹಲವಾರು ಗ್ರಾಮಗಳು ಜಲಾವೃತ
ಚಾಮರಾಜನಗರ, ಆ.11-ಕೆಆರ್ಎಸ್, ಕಬಿನಿಯಿಂದ ಭಾರೀ ಪ್ರಮಾಣದ ನೀರನ್ನು ಹರಿಯಬಿಟ್ಟಿದ್ದರಿಂದಾಗಿ ನದಿಪಾತ್ರದ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, ಗ್ರಾಮಸ್ಥರನ್ನು ಸ್ಥಳಾಂತರಿಸಲು ಅಧಿಕಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಯಿಂದಾಗಿ ಕೆಆರ್ಎಸ್, ಕಬಿನಿ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯಗಳಿಂದ 2 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಇದರಿಂದಾಗಿ ನದಿ ಪಾತ್ರದಲ್ಲಿದ್ದ ಕೊಳ್ಳೇಗಾಲದ ದಾಸನಪುರ, ಹಂಪಾಪುರ, ಹರಳೆ ಗ್ರಾಮಗಳು ಜಲಾವೃತಗೊಂಡಿವೆ.
ಮುಳ್ಳೂರು, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನರು ಸಹ ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ. ಕಬಿನಿ ಜಲಾಶಯದಿಂದ ನದಿಗೆ 1, 25 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದರಿಂದ ನಿನ್ನೆ ಜಮೀನುಗಳು ಜಲಾವೃತವಾಗಿದ್ದವು. ನಿನ್ನೆಯೂ ಕಬಿನಿ ಜಲಾಶಯದಿಂದ 1,50 ಲಕ್ಷ ಕ್ಯೂಸೆಕ್ ಹಾಗೂ ಕೆಆರ್ಎಸ್ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ಒಟ್ಟು 2 ಲಕ್ಷಕ್ಕೂ ಕ್ಯೂಸೆಕ್ ನೀರು ನದಿಗಳಿಗೆ ಬಿಟ್ಟಿರುವುದರಿಂದ ಇಂದು ಹಳೇ ಹಂಪಾಪುರ, ದಾಸನಪುರ ಗ್ರಾಮಗಳು ದ್ವೀಪದಂತಾಗಿವೆ.
ಪ್ರವಾಹ ಹಂತ ಹಂತವಾಗಿ ಹೆಚ್ಚಾಗುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ, ದಾಸನಪುರ ಗ್ರಾಮಸ್ಥರು ಊರು ಬಿಟ್ಟು ಹೋಗಲು ನಿರಾಕರಿಸಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಚಿಂತೆಗೀಡು ಮಾಡಿದೆ.
ಒಂದೆಡೆ ಭಾರೀ ಮಳೆ, ಮತ್ತೊಂದೆಡೆ ನದಿಯಿಂದ ಹೊರ ಬಂದ ಪ್ರವಾಹದ ಸಂಕಷ್ಟದಿಂದ ಗ್ರಾಮಗಳ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಪ್ರಾಣ ಹಾನಿಯಾಗುವ ಆತಂಕವೂ ಇದೆ. ನಿರಾಶ್ರೀತ ಕೇಂದ್ರಗಳಿಗೆ ತೆರಳುವಂತೆ ಎಷ್ಟೇ ಮನವಿ ಮಾಡಿದರೂ ಗ್ರಾಮಸ್ಥರು ನಿರಾಕರಿಸಿದ್ದು, ಒಂದಷ್ಟು ಕಾಲ ಅವರ ಮನವೊಲಿಕೆಗೆ ಅಧಿಕಾರಿಗಳು ಹೈರಾಣಾಗಬೇಕಾಯಿತು.
ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟು ಹಂತ ಹಂತವಾಗಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಕಳೆದ 3 ದಿನಗಳಿಂದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಉಪ ವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ ಅಧಿಕಾರಿಗಳೊಡನೆ ನದಿ ತೀರದ ಗ್ರಾಮಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.
ಇಂದೂ ಸಹ ಸ್ಥಳೀಯ ಶಾಸಕ ಎನ್.ಮಹೇಶ್ ಅವರ ಜತೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈಗಾಗಲೆ ಸ್ಥಳೀಯ ಗ್ರಾಮ ಪಂಚಾಯಿತಿಗಳೊಡನೆ ಸೇರಿ ಹಾಗೂ ಪೆÇಲೀಸ್ರ ಸಹಕಾರದಿಂದ ಪ್ರವಾಹ ಭೀತಿ ಎದುರಿಸಲು ಕ್ರಮ ವಹಿಸಿದ್ದಾರೆ.
ಪಟ್ಟಣದಲ್ಲಿ ಈಗಾಗಲೇ ಗಂಜಿ ಕೇಂದ್ರ ತೆರೆದಿದ್ದು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಈಗಾಗಲೆ ಕಟ್ಟೆಚ್ಚರ ವಹಿಸಿ ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ವಹಿಸಲಿದೆ. ಆಗಾಗಿ ತೀರದ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ.
ನದಿಯಲ್ಲಿ ಪ್ರವಾಹದ ಮಟ್ಟ ತಗ್ಗುವವರೆಗೆ ನದಿ ತೀರದ ಗ್ರಾಮಗಳ ಜನರು ನದಿಯ ಬಳಿ ತೆರಳುವುದಾಗಲಿ ನೀರಿಗೆ ಇಳಿಯುವುದಾಗಿ ಮಾಡಬಾರದು. ತಮ್ಮ ಜಾನುವಾರುಗಳನ್ನು, ಮಕ್ಕಳನ್ನು ನದಿಯ ಬಳಿ ತೆರಳದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ.
ಭಾರೀ ಮಳೆಗೆ ಕುಸಿದುಬಿದ್ದ ಶಾಲಾ ಕಟ್ಟಡ
ಉಡುಪಿ, ಆ.11- ಕರಾವಳಿ ಮಳೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸುಮಾರು ನೂರು ವರ್ಷಗಳ ಇತಿಹಾಸವಿರುವ ಶಾಲೆಯ 45 ವರ್ಷದ ಹಳೆಯ ಕಟ್ಟಡ ಕುಸಿದಿರುವ ಘಟನೆ ನಡೆದಿದೆ.
ಜಿಲ್ಲೆಯ ಬೈಂದೂರಿನಲ್ಲಿರುವ ಶಾಲೆಯ ಕಟ್ಟಡದ ಗೋಡೆಗಳು ನಿನ್ನೆ ಮಧ್ಯಾಹ್ನವೇ ಉದುರಲಾರಂಭಿಸಿದವು. ರಾತ್ರಿ ಸುಮಾರು 10 ಗಂಟೆ ವೇಳೆಗೆ ಭಾರೀ ಶಬ್ಧದೊಂದಿಗೆ ಶಾಲೆ ಕುಸಿದು ಬಿದ್ದಿದೆ.
ಇಡೀ ಕಟ್ಟಡ ಜಖಂ ಆಗಿದ್ದು, ಶಾಲಾ ಕೊಠಡಿಗಳು ನಾಶಗೊಂಡಿವೆ. ಈ ಶಾಲೆಗೆ ನೂರು ವರ್ಷಗಳ ಇತಿಹಾಸವಿದ್ದು, ಬಹಳಷ್ಟು ಮಂದಿ ಕಲಿತು ಉನ್ನತ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ಸುಮಾರು 25 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಶಾಸಕರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೊಡಗಿನ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ
ಮೈಸೂರು, ಆ.11- ಕೊಡಗಿನ ನೆರೆ ಸಂತ್ರಸ್ತರ ರಕ್ಷಣೆಗೆ ಮೈಸೂರಿನ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಉಪಯುಕ್ತ ಉಪಕರಣಗಳೊಂದಿಗೆ ದಾವಿಸಿದ್ದಾರೆ.
ಎರಡು ದೋಣಿಗಳು, ನೂರು ಮೀಟರ್ ದೂರದವರೆಗೆ ಪ್ರಕಾರದ ಬೆಳಕು ನೀಡುವ ಟಾರ್ಚ್ಗಳು, ಹಗ್ಗ, ಟ್ಯೂಬ್ಗಳು ಹಾಗೂ ಈಜುಗಾರರನ್ನು ಕೊಂಡೊಯ್ದು ಕೊಡಗಿನಲ್ಲಿ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ತೊಡಗಿಕೊಂಡಿದ್ದಾರೆ.
ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ತೆರವುಗಿಳಿಸುವುದು, ಕುಸಿದ ಗುಡ್ಡಗಳನ್ನು ತೆರವುಗೊಳಿಸುವುದು ಹಾಗೂ ನದಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಡುತ್ತಿದ್ದಾರೆ.
ಕಬಿನಿ, ನುಗು, ತಾರಕ ಜಲಾಶಯವು ಭರ್ತಿಯಾದ ಹಿನ್ನೆಲೆ-ಕಪಿಲ ನದಿಗೆ ನೀರು ಬಿಡುಗಡೆ
ನಂಜನಗೂಡು, ಆ.11- ವಯನಾಡು ಪ್ರದೇಶದಲ್ಲಿ ಬೀಳುತ್ತೀರುವ ಮಳೆಯಿಂದಾಗಿ ಕಬಿನಿ, ನುಗು, ತಾರಕ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಕಪಿಲ ನದಿಗೆ ನೀರು ಬಿಟ್ಟಿರುವುದರಿಂದ ನದಿಪಾತ್ರದಲ್ಲಿರು ನೂರಾರು ಕುಟುಂಬಗಳು ಶ್ರೀ ಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಗಿರಿಜಾ ಕಲ್ಯಾಣ ಸೇರಿದಂತೆ ಹಲವು ಗಂಜೀಕೇಂದ್ರದಲ್ಲಿ ವಾಸ್ತವ್ಯ ಹೂಡಿರುವ ನಿರಾಶ್ರೀತರನ್ನು ಸ್ಥಳೀಯ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಸಾಂತ್ವನ ಹೇಳಿದೆ.
ಶಾಸಕರಾದ ರಾಮದಾಸ್, ಬಿ.ಹರ್ಷವರ್ಧನ್, ಸಿ.ಎಸ್.ನಿರಂಜನ್ಕುಮಾರ್, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜೇಯೇಂದ್ರರವರೊಳಗಂಡ ತಂಡ ಭೇಟಿ ನೀಡಿ ನಿರಾಶ್ರೀತ ಸಮಸ್ಯೆಯನ್ನು ಆಲಿಸಿದೆ.
ಈ ವೇಳೆ ಶಾಸಕ ಎ.ರಾಮದಾಸ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಲ್ಲಾ ಶಾಸಕರ ಜೊತೆಗೆ ವಿಜೇಯಂದ್ರರವರನ್ನು ಕಳುಹಿಸಿಕೊಟ್ಟು ವಯನಾಡು ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸಂಕಷ್ಟಕ್ಕಿಂಡಾದ ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಇಲ್ಲಿಯವರೆಗೂ ಒಂದು ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದಿ ಹೋಗಿದೆ. ಎಲ್ಲಾ ಅಧಿಕಾರಿಗಳು- ಜನಪ್ರತಿನಿಧಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ಆವಾಜ್ ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನ ಅಡಿಯಲ್ಲಿ ನಿರಾತ್ರಿತರಿಗೆ ಮನೆಗಳನ್ನು ಕಟ್ಟಿಸಿಕೊಡಿಸಲು ತಿರ್ಮಾನಿಸಲಾಗಿದೆ. ಅದರ ಜೊತೆಗೆ ಪ್ರವಾಹ ಪೀಡಿತ ತಾಲೂಕುಗಳಿಗೆ ಈಗಾಗಲೇ 25 ಲಕ್ಷ ರೂ.ಬಿಡುಗಡೆ ಮಾಡಲಾಗಿದ್ದು, ಮೈಸೂರು ಜಿಲ್ಲೆಗೆ 11 ಕೋಟಿ ರೂ. ಬಿಡುಗಡೆಯಾಗಿದೆ. ಅದನ್ನು ಯಾವುದೇ ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನೀಡಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಹೆಚ್ಚಿನ ಅನುದಾನ ಸಿಗುವ ಭರವಸೆ ಇದೆ. ತಾಲ್ಲೂಕಿನಾದ್ಯಾಂತ 8 ಗಂಜೀ ಕೇಂದ್ರಗಳು ತೆರೆಯಲಾಗಿದ್ದು, ನಿರಾಶ್ರೀತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯಧರ್ಶಿ ವಿಜೇಯೇಂದ್ರ ಮಾತನಾಡಿ, ಪ್ರವಾಹ ನಲುಗಿದ ಜನರಿಗೆ ಯಾವುದೇ ಯುವ ಮೋರ್ಚಾ ತಂಡ ಶಾಸಕರ ಜೊತೆಗೂಡಿ ಅವರಿಗೆ ಬೇಕಾರದ ನೆರವು ನೀಡಲು ಬಿ.ಎಸ್.ಯಡಿಯೂರಪ್ಪನವರು ಹೇಳಿದಂತೆ ಪ್ರವಾಹಕ್ಕಿಂಡಾತ ಜನತೆ ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲಾ ನಿರಾಶ್ರಿತ ಜನರ ಜೊತೆಗೆ ಸರ್ಕಾರವಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನ್ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಎಸ್.ಮಹದೇವಯ್ಯ, ಕಾಪು ಸಿದ್ದಲಿಂಗಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಬಾಲಚಂದ್ರು, ಜಿಪಂ ಸದಸ್ಯ ಗುರುಸ್ವಾಮಿ, ಸದಾನಂದ, ಜಿಪಂ ಮಾಜಿ ಸದಸ್ಯರಾದ ಸಿ.ಚಿಕ್ಕರಂಗನಾಯಕ, ಎಸ್.ಎಂ.ಕೆಂಪಣ್ಣ, ಎಪಿಎಂಸಿ ಸದಸ್ಯ ಗುರುಸ್ವಾಮಿ, ಮುಖಂಡರಾದ ಎನ್.ಆರ್. ಕೃಷ್ಣಪ್ಪಗೌಡ, ದೇವನೂರು ಪ್ರತಾಪ್, ನಗರಸಭಾ ಸದಸ್ಯರಾದ ಗಿರೀಶ್, ಮಹದೇವಸ್ವಾಮಿ, ಯೋಗೀಶ್, ಮಹದೇವ ಪ್ರಸಾದ್, ಉಪ ವಿಭಾಗ ಅಧಿಕಾರಿ ಶಿವೇಗೌಡ, ತಹಸಿಲ್ಧಾರ್ ಕೆ.ಎಂ.ಮಹೇಶ್ಕುಮಾರ್ ಮತ್ತಿತರರಿದ್ದರು.
ಮಳೆಗೆ ನಿನ್ನೆ ಒಂದೇ ದಿನ ನಾಲ್ವರು ಬಲಿ
ಚಿಕ್ಕಮಗಳೂರು, ಆ.11-ಕಾಫಿನಾಡು ಮಳೆಗೆ ನಿನ್ನೆ ಒಂದೇ ದಿನ ನಾಲ್ವರು ಬಲಿಯಾಗಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಾಲೂರು ಸಮೀಪದ ಹೊರಟ್ಟಿ ಗ್ರಾಮದಲ್ಲಿ ಗುಡ್ಡ ಕುಸಿದು ತಾಯಿ ಶೇಷಮ್ಮ (55) ಹಾಗೂ ಮಗ ಸತೀಶ್ (35)ಸಾವನ್ನಪ್ಪಿದ್ದಾರೆ.
ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಗುಡ್ಡ ಕುಸಿದಿದ್ದು, ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಳಲರಾಯನದುರ್ಗದ ಬಳಿ ದುರ್ಗದಹಳ್ಳಿ ಪ್ರವಾಹದಲ್ಲಿ ಸುಮಂತ್ (10) ಕೊಚ್ಚಿಹೋಗಿದ್ದಾನೆ.
ಆಲ್ದೂರು ಸಮೀಪದ ಗೌತಮೇಶ್ವರ ಹೊಳೆಯಲ್ಲಿ ಕೂದುವಳ್ಳಿ ಗ್ರಾಮದ ರೈತ ಚಂದ್ರೇಗೌಡ ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದಿಂದ ವಾಡಿಕೆಗಿಂತ ನಾಲ್ಕು ಪಟ್ಟು ಮಳೆ ಸುರಿದಿದ್ದು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಕಳಸಾ, ಹೊರನಾಡು ಈ ಭಾಗದಲ್ಲಿ ಪ್ರವಾಹ ಉಂಟಾಗಿದೆ.
ಜಿಲ್ಲಾಡಳಿತ ವಾಯುಮಾರ್ಗದಲ್ಲಿ ಸಂತ್ರಸ್ತರನ್ನು ರಕ್ಷಿಸಲು ಹೆಲಿಕಾಫ್ಟರ್ಗಾಗಿ ಮನವಿ ಮಾಡಿದ್ದು, ಕೇಂದ್ರದಿಂದ 34 ಯೋಧರು ಮೂಡಿಗೆರೆಯಲ್ಲಿ ಪ್ರವಾಹಕ್ಕೆ ಸಿಲುಕಿದ್ದವರನ್ನು ರಕ್ಷಿಸಲು ಮುಂದಾಗಿದ್ದಾರೆ.
ಹೇಮಾವತಿ ನದಿ ಹರಿವು ಹೆಚ್ಚಳವಾಗಿ ಉಗ್ಗೇಹಳ್ಳಿಯಲ್ಲಿ 12 ಮನೆಗಳು ಜಲಾವೃತವಾಗಿದ್ದು, ಸುಂಕಶಾಲೆಯಲ್ಲಿ ಸಿಲುಕಿಕೊಂಡಿದ್ದ 14 ಮಂದಿಯನ್ನು ರಕ್ಷಿಸಿಸಲು ಮುಂದಾಗಿದ್ದಾರೆ.
ಕಳಸ ಸುತ್ತಮುತ್ತ 70ಕ್ಕೂ ಹೆಚ್ಚು ಮನೆ ಕುಸಿತಗೊಂಡಿದ್ದು, ದೇವರಗುಡ್ಡ, ಅರೆಬೈಲು, ಗಣಪತಿ ಕಟ್ಟಿ, ಹುಳುವಳ್ಳಿ, ಕಲ್ಮಕಿ, ಬಲಿಗೆ, ಬಾಳೆಹೊಳೆ ಗ್ರಾಮದಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ.
ಆಶ್ಲೇಷಮಳೆಗೆ ಆಲೂಗಡ್ಡೆ, ಮೆಕ್ಕೆಜೋಳ, ರಾಗಿ, ಭತ್ತ ಮುಂತಾದ ಮಳೆಗಳು ಕೊಚ್ಚಿಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ. ಬಿರುಗಾಳಿಗೆ ಕಾಫಿ ತೋಟದಲ್ಲಿ ಮರಗಳು ನೆಕ್ಕುರುಳಿವೆ.
ಭೀಮನಹಳ್ಳಿ, ಹೊದಿರಾಯನಹಳ್ಳಿ, ಕಲ್ಕತ್ಗಿರಿಹಳ್ಳ, ಕೊಂಡೆಕಾಡನಹಳ್ಳಿ ತುಂಬಿ ಹರಿಯುತ್ತಿದ್ದು, ನೂರಾರು ವರ್ಷದ ಹಳೆಯ ಸೇತುವೆ ನೀರಿನಸೆಳೆತಕ್ಕೆ ಸಿಲುಕಿ ಶಿಥಿಲಗೊಂಡಿವೆ.
ಚಿಕ್ಕಮಗಳೂರಿನಿಂದ ಶೃಂಗೇರಿ ಕಡೆಗೆ, ಕಳಸದಿಂದ ಹೊರನಾಡು ಕಡೆಗೆ ತೆರಳುವ ಕೆಎಸ್ಆರ್ಟಿಸಿ ಬಸ್ಗಳನ್ನು ಸ್ಥಗಿತಗೊಳಿಸಲಾಗಿದೆ.
ನಿರಂತರ ಮಳೆಯಿಂದಾಗಿ 60ಎಕರೆಕಾಫಿ, 40 ಎಕರೆ ಭತ್ತ ಸಂಪೂರ್ಣ ನಾಶವಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ಕೂಡಲೇ ಈ ಭಾಗದ ಸಂಸದರು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಉಂಟಾಗಿರುವವರ ನೆರವಿಗೆ ಧಾವಿಸಿ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅನಾಥ ಶವಕ್ಕೆ ಶಾಸ್ತ್ರೋಕ್ತವಾಗಿ ಸಂಸ್ಕಾರ-ಇತರರಿಗೆ ಮಾದರಿಯಾದ ಬಾಣಸಿಗ
ಚಿಕ್ಕಬಳ್ಳಾಪುರ,ಆ.11- ಅನಾಥ ಶವಕ್ಕೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡುವ ಮೂಲಕ ನಗರದ ಬಾಣಸಿಗರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ನಗರದಲ್ಲಿ ಅಲ್ಲಲ್ಲಿ ಓಡಾಡಿಕೊಂಡು ಯಾರೋ ಕೊಟ್ಟ ಕಾಫಿ, ಟೀ, ಬಿಸ್ಕೆಟ್ ಮತ್ತಿತರ ತಿನಿಸುಗಳನ್ನು ಸೇವಿಸಿ ಬದುಕು ಸಾಗಿಸುತ್ತಿದ್ದ ಅನಾಥ ವ್ಯಕ್ತಿಯೊಬ್ಬ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ವಿಷಯ ತಿಳಿದು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾರಸುದಾರರು ಇದ್ದಾರೆಯೇ ಎಂಬ ಬಗ್ಗೆ ಮಾಹಿತಿಗೆ ಮನವಿ ಮಾಡಿದ್ದರು.
ಶವ ಪಡೆಯಲು ಯಾರೂ ಬಾರದ ಕಾರಣ ನಿನ್ನೆ ಮಹಜರು ನಡೆಸಿ ಅಪ್ಪಯ್ಯನಕುಂಟೆಗೆ ಕೊಂಡೊಯ್ದು ಮಣ್ಣು ಮಾಡಲು ಸಿದ್ದತೆ ನಡೆಸಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸಮಾಜ ಸೇವಕ ವೃತ್ತಿಯಲ್ಲಿ ಬಾಣಸಿಗನಾಗಿರುವ ಹೊನ್ನಗಿರಿಯಪ್ಪನಹಳ್ಳಿ ಹೋಟೆಲ್ ರಾಮಣ್ಣ ದಾವಿಸಿ ತಮ್ಮ ಸಂಗಡಿಗರೊಂದಿಗೆ ಶಾಸ್ತ್ರೋಕ್ತವಾಗಿ ಅನಾಥನ ಶವ ಸಂಸ್ಕಾರ ಮಾಡಿದ್ದಾರೆ.
ಇದಕ್ಕೆ ನಗರ ಠಾಣೆಯ ಮುಖ್ಯಪೇದೆ ಅಶ್ವಥ್ರಾಜು, ಪೇದೆ ಗಂಗಾಧರ, ಜೆಸಿಬಿ ರಾಜಶೇಖರ್ ರೆಡ್ಡಿ, ಆ್ಯಂಬುಲೆನ್ಸ್ ಮುರುಳಿ, ಶಿವಕುಮಾರ್ ಸಾಕ್ಷಿಯಾದರು.
ಆಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆ ಹಿನ್ನಲೆ-ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳಿಗೆ ನಿರಂತರ ನೀರು ಬಿಡುಗಡೆ
ಕೊಳ್ಳೆಗಾಲ,ಆ. 11- ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆ.ಆರ್.ಎಸ್ ಜಲಾಶಯಗಳಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗಳಿಗೆ ನಿರಂತರವಾಗಿ ಬಿಡುತ್ತಿರುವುದರಿಂದ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಗ್ರಾಮಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ತಾಲ್ಲೂಕಿನ ಹಳೇ ಹಂಪಾಪುರ, ದಾಸನಪುರ ಗ್ರಾಮಗಳ ಸುತ್ತಾ ನೀರು ಆವರಿಸಿದ್ದು ಯಾವುದೇ ಕ್ಷಣದಲ್ಲಾದರು ಗ್ರಾಮದೊಳಗೆ ನೀರು ನುಗ್ಗಿ ಜಲಾವೃತವಾಗುವ ಬೀತಿ ಎದುರಾಗಿದೆ.
ಮುಳ್ಳೂರು, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನರು ಸಹ ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ. ಕಬಿನಿ ಜಲಾಶಯದಿಂದ ನದಿಗೆ 1, 25 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದರಿಂದ ನಿನ್ನೆ ಜಮೀನುಗಳು ಜಲಾವೃತವಾಗಿದ್ದವು. ನಿನ್ನೆಯೂ ಕಬಿನಿ ಜಲಾಶಯದಿಂದ 1,50 ಲಕ್ಷ ಕ್ಯೂಸೆಕ್ ಹಾಗೂ ಕೆಆರ್ಎಸ್ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ಒಟ್ಟು 2 ಲಕ್ಷಕ್ಕೂ ಕ್ಯೂಸೆಕ್ ನೀರು ನದಿಗಳಿಗೆ ಬಿಟ್ಟಿರುವುದರಿಂದ ಇಂದು ಹಳೇ ಹಂಪಾಪುರ, ದಾಸನಪುರ ಗ್ರಾಮಗಳು ದ್ವೀಪದಂತಾಗಿವೆ.
ಇದರಿಂದಾಗಿ ಜನರು ಕಂಗಾಲಾಗಿದ್ದು ಬೆಳಗ್ಗೆಯಿಂದ ತಮ್ಮ ತಮ್ಮ ಜಾನುವಾರುಗಳನ್ನು ರಕ್ಷಿಸಲು ಗ್ರಾಮದಿಂದ ಹೊರಗಡೆ ಸಾಗಿಸುತ್ತಿದ್ದಾರೆ.
ಕಳೆದ 3 ದಿನಗಳಿಂದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹಾಗೂ ಉಪ ವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ ಅಧಿಕಾರಿಗಳೊಡನೆ ನದಿ ತೀರದ ಗ್ರಾಮಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದು ಇಂದು ಸಹ ಸ್ಥಳೀಯ ಶಾಸಕ ಎನ್.ಮಹೇಶ್ ರೊಡನೆ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈಗಾಗಲೆ ಸ್ಥಳೀಯ ಗ್ರಾಮ ಪಂಚಾಯಿತಿಗಳೊಡನೆ ಸೇರಿ ಹಾಗೂ ಪೊಲೀಸ್ ಇಲಾಖೆಯ ಸಹಕಾರ ದೊಡನೆ ಪ್ರವಾಹ ಭೀತಿ ಎದುರಿಸಲು ಕ್ರಮ ವಹಿಸಿದ್ದಾರೆ.
ಪಟ್ಟಣದಲ್ಲಿ ಈಗಾಗಲೇ ಗಂಜಿ ಕೇಂದ್ರ ತೆರೆದಿದ್ದು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಈಗಾಗಲೆ ಕಟ್ಟೆಚ್ಚರ ವಹಿಸಿ ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮ ವಹಿಸಲಿದೆ. ಆಗಾಗಿ ತೀರದ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ನದಿಯಲ್ಲಿ ಪ್ರವಾಹದ ಮಟ್ಟ ತಗ್ಗುವವರೆಗೆ ನದಿ ತೀರದ ಗ್ರಾಮಗಳ ಜನರು ನದಿಯ ಬಳಿ ತೆರಳುವುದಾಗಲಿ ನೀರಿಗೆ ಇಳಿಯುವುದಾಗಿ ಮಾಡಭಾರದು. ತಮ್ಮ ಜಾನುವಾರುಗಳನ್ನು, ಮಕ್ಕಳನ್ನು ನದಿಯ ಬಳಿ ತೆರಳದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ.
ಉಕ್ಕಿ ಹರಿಯುತ್ತಿರುವ ಕಪಿಲಾ ನದಿ-ಜಲದಿಗ್ಬಂಧನವಾದ ನಂಜನಗೂಡು
ಮೈಸೂರು, ಆ. 11- ಕಪಿಲಾನದಿ ಉಕ್ಕಿ ಹರಿದು ಇಡೀ ನಂಜನಗೂಡು ಪಟ್ಟಣಕ್ಕೆ ಜಲದಿಗ್ಬಂಧನವಾಗಿದೆ.
ಕಪಿಲೆ ಬೋರ್ಗರೆಯುತ್ತಿದ್ದು, ನದಿ ನೀರು ನಂಜನಗೂಡು ಪಟ್ಟಣದೊಳಗೆ ನುಗ್ಗಿದ್ದು, ಮಲ್ಲನಮೂಲೆ ಮಠ ಭಾಗಶಃ ಮುಳುಗಡೆಯಾಗಿದೆ. ನಿನ್ನೆ ಮಠದೊಳಗೆ ನೀರು ನುಗ್ಗಿತ್ತು. ಆದರೆ ಇಂದು ಮಠವೇ ಮುಳುಗುತ್ತಿದೆ. ಮಠದಲ್ಲಿದ್ದ ಶ್ರೀಗಳು ಮತ್ತು ಮತ್ತಿತರರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ನಂಜನಗೂಡಿನ ಬಹುತೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಯುವಬ್ರಿಗೇಡ್ ಸದಸ್ಯರು ಗಾಳಿ ತುಂಬಿದ ಟ್ಯೂಬ್ಗಳ ಮೂಲಕ ಮನೆಗಳಿಂದ ವೃದ್ಧರು, ಮಕ್ಕಳು, ಮಹಿಳೆಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಂದು ಬಿಡುತ್ತಿದ್ದಾರೆ.
ಪಟ್ಟಣದಲ್ಲಿ ನೀರು ತುಂಬಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ, ಬಹಳಷ್ಟು ಕಡೆ ಜಾನುವಾರುಗಳನ್ನು ಹಾಗೂ ನೂರಾರು ಜನರನ್ನು ಪರಿಹಾರ ಕೇಂದ್ರಗಳಿಗೆ ರವಾನಿಸಲಾಗಿದೆ.
ಜಿಲ್ಲಾಡಳಿತ ಪರಿಹಾರ ಕೇಂದ್ರಗಳಲ್ಲಿ ಜನರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಸಾಮಗ್ರಿ ಊಟ-ಉಪಹಾರದ ವ್ಯವಸ್ಥೆ ಮಾಡಿದೆ.
ಎರಡು ಬಲಿ: ವರುಣನ ಅಬ್ಬರಕ್ಕೆ ನಿನ್ನೆ ವರೆಗೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾದಂತಾಗಿದೆ. ಮುಬೀನ(35) ಎಂಬುವರು ಮನೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅಕ್ಕ-ಪಕ್ಕದವರು ಆಸ್ಪತ್ರೆಗೆ ಸಾಗಿಸುವಾಗ ಆಕೆ ಮೃತಪಟ್ಟಿದ್ದಾಳೆ
ಮೊನ್ನೆ ವೀರನಹೊಸಹಳ್ಳಯ ಗಿರಿಜನ ಹಾಡಿಯಲ್ಲಿ ಗಣೇಶ ಎಂಬಾತ ಮನೆ ಕುಸಿದು ಸಾವನ್ನಪ್ಪಿದ್ದರು.
ಹುಣಸೂರಿನ ಲಕ್ಷಣತೀರ್ಥ ಭೋರ್ಗರೆಯುತ್ತಿದ್ದು, ಸಾವಿರಾರು ಎಕರೆ ಪ್ರದೇಶದ ಜಮೀನಿನಲ್ಲಿ ನೀರು ತುಂಬಿ ಬೆಳೆ ಸಂಪೂರ್ಣ ನಾಶವಾಗಿದೆ.
ಕೇರಳದ ವಯನಾಡಿನಲ್ಲಿ ಇನ್ನೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಎಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಹರಿದು ಬರುತ್ತಿದೆ.
ಬೆಳಿಗ್ಗೆ ಸಹಾ 83,330 ಕ್ಯೂಸೆಕ್ಸ್ ನೀರು ಬರುತ್ತಿದೆ. ಜಲಾಶಯದಿಂದ 1ಲಕ್ಷದ 20ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಇದರಿಂದಾಗಿ ನದಿ ಪಾತ್ರದ ಗ್ರಾಮಗಳಲ್ಲಿ ನೀರು ನುಗ್ಗುವ ಭೀತಿಯಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಅವಘಡ ಎದುರಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರು-ನದಿ ಪಾತ್ರದ ಪ್ರದೇಶದಲ್ಲಿ ಸಂಭವಿಸಿದ ಹಲವಾರು ಅವಘಡಗಳು
ಕೆ.ಆರ್.ಪೇಟೆ,ಆ.11-ಗೊರೂರು ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುವ ಕಾರಣ ತಾಲೂಕಿನಲ್ಲಿ ಸುಮಾರು 45ಕಿ.ಮೀ ದೂರದಷ್ಟು ಹರಿಯುವ ಹೇಮಾವತಿ ನದಿ ಪಾತ್ರದ ಪ್ರದೇಶದಲ್ಲಿ ಹಲವಾರು ಅವಘಡಗಳು ಸಂಭವಿಸಿದ್ದು ಕೊಟ್ಯಾಂತರ ರೂ ನಷ್ಟ ಉಂಟಾಗಿರುವ ವರದಿಯಾಗಿದೆ.
ಹೇಮಗಿರಿ ದೇವಾಲಯದ ನದಿ ತೀರದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬಗಳನ್ನು ಮುಂಜಾಗ್ರತ ಕ್ರಮವಾಗಿ ಪಾಂಡವಪುರ ಉಪವಿಭಾಗಾಧಿಕಾರಿ ಎಂ.ಶೈಲಜಾ ಅವರು ಮತ್ತು ತಹಸೀಲ್ದಾರ್ ಎಂ.ಶಿವಮೂರ್ತಿ ರವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ತಾಲೂಕಿನ ಬಂಡಿಹೊಳೆ ಸಮೀಪ ನಿರ್ಮಾಣ ಮಾಡಿದ್ದ ತ್ರಿಶೂಲ್ ಜಲ ವಿದ್ಯುತ್ ಕೇಂದ್ರ ನದಿ ನೀರಿನಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದೆ. ಮಣ್ಣು ಮಿಶ್ರಿತ ನದಿಯ ನೀರು ಜಲ ವಿದ್ಯುತ್ ಕೇಂದ್ರಕ್ಕೆ ನುಗ್ಗಿರುವುದರಿಂದ ಟರ್ಬೈನ್ಗಳು ಮುಳುಗಿವೆ. ಇದರಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಟರ್ಬೈನ್ ಜೊತೆಗೆ ಹಲವು ಯಂತ್ರಗಳಿಗೂ ನೀರು ನುಗ್ಗಿದೆ. ಜಲ ವಿದ್ಯುತ್ ಕೇಂದ್ರ ಮುಳುಗಡೆಯಿಂದ ಸಮೀಪವೇ ಇದ್ದ ಜಮೀನುಗಳಿಗೂ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಚಿಕ್ಕಮಂದಗೆರೆ ಗ್ರಾಮದ ಬಳಿ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ನದಿಯ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಕಿರು ಸೇತುವೆಗಳು ಮುಚ್ಚಿ ಹೋಗಿವೆ. ಮನೆಗಳು ಜಲಾವೃತವಾಗಿವೆ. ಗ್ರಾಮಸ್ಥರು ಸಹಾಯ ಹಸ್ತ ಚಾಚುತ್ತಿದ್ದಾರೆ. ಮಂದಗೆರೆ ಸಮೀಪದ ಕುರಾವು ದ್ವೀಪದ ಸುತ್ತಲೂ ಹೇಮಾವತಿ ನದಿಯಿಂದ ಜಲಾವೃತಗೊಂಡಿದ್ದು ಅಲ್ಲಿದ್ದ ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಬಂಡಿಹೊಳೆ, ನಾಟನಹಳ್ಳಿ, ಬೆಳತೂರು, ಮಡುವಿನಕೋಡಿ, ಆಲಂಬಾಡಿ, ಕಟ್ಟೆಕ್ಯಾತನಹಳ್ಳಿ, ಕಟ್ಟಹಳ್ಳಿ, ಭೂವರಹನಾಥಕಲ್ಲಹಳ್ಳಿ, ದಡದಹಳ್ಳಿ, ಅಕ್ಕಿಹೆಬ್ಬಾಳು ಮತ್ತಿತರರ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನದಿಯ ನೀರು ನುಗ್ಗಿದೆ. ಇದರಿಂದ ತೆಂಗು, ಬಾಳೆ, ಅಡಿಕೆ, ಕಬ್ಬು ಮತ್ತಿತರರ ಬೆಳೆಗಳು ನೀರಿನಿಂದ ಜಲಾವೃತಗೊಂಡಿವೆ. ಇದರಿಂದ ರೈತರಿಗೆ ಕೊಟ್ಯಾಂತರ ರೂ ನಷ್ಟ ಉಂಟಾಗಿದೆ.
ಅಪಾಯದಂಚಿನಲ್ಲಿ ಅಕ್ಕಿಹೆಬ್ಬಾಳು ಸೇತುವೆ: ಸುಮಾರು 100ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಅಕ್ಕಿಹೆಬ್ಬಾಳು ಸೇತುವೆ ಶೇ.75ರಷ್ಟು ಹೇಮಾವತಿ ನದಿ ನೀರಿನಿಂದ ಮುಳುಗಿದ್ದು ಇದೇ ರೀತಿ ನೀರು ಯಥೇಚ್ಚವಾಗಿ ಹರಿದರೆ ಸೇತುವೆಗೆ ಅಪಾಯವಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಸೇತುವೆ ಮೇಲೆ ಎರಡೂ ಬದಿಯಲ್ಲಿ ಗಿಡಗಂಟೆಗಳು ಬೆಳೆದು ಬೇರುಬಿಟ್ಟುಕೊಂಡಿದ್ದು ಸೇತುವೆಯು ಸಣ್ಣ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಅಪಾಯಕ್ಕೆ ಸೂಚನೆ ನೀಡುತ್ತಿವೆ.
ಡಿಸಿ,ಎಸಿ ಬೇಟಿ: ತಾಲೂಕಿನ ಬಂಡಿ ಹೊಳೆ ಸಮೀಪದ ಹೇಮಗಿರಿ ಫಾಲ್ಸ್ ನಲ್ಲಿ ಹೇಮಾವತಿ ನದಿಯು ಉಕ್ಕಿ ಹರಿಯುತ್ತಿರುವ ಸ್ಥಳ ಸೇರಿದಂತೆ ತಾಲೂಕಿನ ನದಿಪಾತ್ರದ ವಿವಿಧ ಗ್ರಾಮಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮತ್ತು ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು ಅವರು ಬೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಗೊರೂರು ಅಣೆಕಟ್ಟೆಯಿಂದ ಸುಮಾರು 1ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು. ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಎಚ್ಚರಿಕೆ ಫಲಕ: ಹೇಮಾವತಿ ನದಿಯಲ್ಲಿ ನೀರು ಹೆಚ್ಚಿರುವ ಹಿನ್ನೆಲೆಯಲ್ಲಿ ಅಪಾಯವಿರುವ ಸ್ಥಳಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಾಗೂ ಅಕ್ಕಿಹೆಬ್ಬಾಳು, ಮಂದಗೆರೆ, ಬಂಡಿಹೊಳೆ ಗ್ರಾಮ ಪಂಚಾಯಿತಿಗಳು ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ ರಕ್ಷಣೆಗೆ ಪೊಲೀಸರನ್ನು ನಿಯೋಜನೆ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ.
ಸಾರ್ವಜನಿಕರ ದಂಡು: ಮೈದುಂಬಿ ಹರಿಯುತ್ತಿರುವ ಅಕ್ಕಿಹೆಬ್ಬಾಳು ಸೇತುವೆಯ ಬಳಿ, ಹೇಮಗಿರಿ ಅಣೆಕಟ್ಟೆ, ಮಂದಗೆರೆ ಅಣೆಕಟ್ಟೆ ಬಳಿ ಸಾವಿರಾರು ಮಂದಿ ಜಮಾಯಿಸಿ ಹೇಮಾವತಿ ನದಿಯನ್ನು ವೀಕ್ಷಣೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ನೋಡಲ್ ಅಧಿಕಾರಿಗಳ ನೇಮಕ: ಹೇಮಾವತಿ ಪ್ರವಾಹ ನಿಯಂತ್ರಣ ಕರ್ತವ್ಯ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಪಂ ಇಒ ಹೇಮಾವತಿ ನೀರಾವರಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗಿದ್ದು ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಜೊತೆಗೆ ಹಾನಿಯ ಬಗ್ಗೆ ನಿತ್ಯ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ತಿಳಿಸಿದ್ದಾರೆ.
ಟಿ.ನರಸೀಪುರದಲ್ಲಿ ಪ್ರವಾಹ ಭೀತಿ:
ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಂದ ಒಂದು ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇಂದು ಬೆಳಗ್ಗೆಯಿಂದ ಕಾವೇರಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು ಕೆಲ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹುಣಸೂರು ಹಾಗು ತಲಕಾಡಿನ ರಸ್ತೆಗಳ ಮೇಲೆ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಈ ಭಾಗದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಕಾವೇರಿ -ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿದ್ದು ನೀರಿನ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ನದಿ ಪಾತ್ರದಲ್ಲಿ ವಾಸಿಸುವ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆ ಯನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ.
ಸ್ಥಳಾಂತರಗೊಂಡ ಮದುವೆ:ತಿರುಮಕೂಡಲಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿವಾಹವನ್ನು ಪ್ರವಾಹದಿಂದ ಇಡೀ ಕಲ್ಯಾಣ ಮಂಟಪವೇ ಜಲಾವೃತಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಮಹದೇಶ್ವರ ಕಲ್ಯಾಣಮಂಟಪಕ್ಕೆ ಸ್ಥಳಾಂತರಿಸಲಾಗಿದೆ.
ಜನಸಾಗರ: ಕಳೆದ ಬಾರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಅಬ್ಬರಿಸಿ ಮೈದುಂಬಿ ಹರಿಯುತ್ತಿರುವ ನಯನ ಮನೋಹರ ದೃಶ್ಯ ಕಣ್ತುಂಬಿ ಕೊಳ್ಳಲು ಜನ ಸಾಗರವೇ ನದಿಯೆಡೆಗೆ ಹರಿದು ಬರುತ್ತಿದೆ.
ಆಯ ತಪ್ಪಿ ನದಿಗೆ ಬಿದ್ದ ವ್ಯಕ್ತಿಯೊಬ್ಬರ ರಕ್ಷಣೆ
ಮೈಸೂರು, ಆ.11- ಸೇತುವೆ ದಾಟುವಾಗ ಆಯ ತಪ್ಪಿ ನದಿಗೆ ಬಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಲಾಗಿದೆ.
ಹುಣಸೂರು ತಾಲ್ಲೂಕಿನ ಕೂಡ್ಲೂರು ಗ್ರಾಮದ ಅಂಥೋಣಿ ರಾಜ್ ಎಂಬುವರನ್ನು ರಕ್ಷಿಸಲಾಗಿದೆ.
ಅಂಥೋಣಿ ರಾಜ್ ತುಂಬಿ ಹರಿಯುತ್ತಿದ್ದ ಲಕ್ಷ್ಮಣತೀರ್ಥ ನದಿಯ ಸೇತುವೆ ಮೇಲೆ ಹೋಗುತ್ತಿದ್ದರು. ಈ ವೇಳೆ ನದಿ, ಸೇತುವೆ ತಿಳಿಯದೆ ನೀರಿಗೆ ಉರುಳಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಜನರು ಧಾವಿಸಿ ಆತನನ್ನು ರಕ್ಷಿಸಿದ್ದಾರೆ.
ನೆರೆ ಹಾವಳಿ ಹಿನ್ನೆಲೆ-ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಕಂಟ್ರೋಲ್ ರೂಂ ಆರಂಭ
ಮೈಸೂರು, ಆ.11- ನೆರೆ ಹಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಂಟ್ರೋಲ್ ರೂಂ ಆರಂಭಿಸಿದೆ.
ತಾಲ್ಲೂಕು ಪಂಚಾಯ್ತಿ ಕಚೇರಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದೆ ಎಂದು ಜಿಪಂ ಸಿಇಒ ಜ್ಯೋತಿ ತಿಳಿಸಿದ್ದಾರೆ.
ಕಂಟ್ರೋಲ್ ರೂಂನಲ್ಲಿ 24 ಗಂಟೆ ಕಾಲ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನೆರೆ ಹಾವಳಿ ಹಾಗೂ ಪ್ರವಾಹ ಸಂಬಂಧ ತೊಂದರೆಗಳು ಎದುರಾದರೆ ತಕ್ಷಣ ದೂರು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ನಂಜನಗೂಡು-ನೋಡಲ್ ಅಧಿಕಾರಿ ಶ್ರೀಕಂಠರಾಜೇ ಅರಸು 08221-225353, ಮೈಸೂರು ತಾಲ್ಲೂಕು ಕೃಷ್ಣಕುಮಾರ್- 0821-2414433, ಹುಣಸೂರು ತಾಲ್ಲೂಕು -ಗಿರೀಶ್-08222-252028, ಎಚ್.ಡಿ.ಕೋಟೆ ತಾಲ್ಲೂಕು-ರಾಮಲಿಂಗಯ್ಯ -08228-255277 ಅವರನ್ನು ಸಾರ್ವಜನಿಕರ ಸಂಪರ್ಕಿಸಿ ಮನವಿ ಸಲ್ಲಿಸಬಹುದು ಎಂದು ಜ್ಯೋತಿ ತಿಳಿಸಿದರು.