ಬಾಗಲಕೋಟೆ; ಉತ್ತರ ಕರ್ನಾಟಕ ಭಾಗದಲ್ಲಿ ಮುಂದುವರೆಯತ್ತಿರುವ ಭಾರೀ ಮಳೆಯಿಂದಾಗಿ ಬಾಗಲಕೋಟೆಯಲ್ಲಿ ಪ್ರವಾಹ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ಕೂಡಲಸಂಗಮದ ಐತಿಹಾಸಿಕ ಐಕ್ಯಮಂಟಪ ಕುಸಿಯುವ ಭೀತಿಯನ್ನು ಎದುರಿಸಿದೆ.
ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೂಡಲಸಂಗಮದ ದೇಗುಲ ಹಾಗೂ ಐಕ್ಯ ಮಂಟಪ ಮುಳುಗಡೆಯಾಗಿದೆ. ಪರಿಣಾಮ ಕೂಡಲಸಂಗಮ ದೇವನಿಗೆ ಕಳೆದ ಮೂರು ದಿನಗಳಿಂದ ಕೈಂಕರ್ಯಗಳು ನಡೆದಿಲ್ಲ. ಇನ್ನೂ ಈ ನಡುವೆ ಐಕ್ಯ ಮಂಟಪವೇ ಕುಸಿಯುವ ಭೀತಿ ಎದುರಾಗಿದೆ.
ಹುನಗುಂದ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಭಾರೀ ಪ್ರವಾಹದಿಂದಾಗಿ ಮುಳುಗಡೆಯಾಗಿರುವ ಐಕ್ಯ ಮಂಟಪ 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇತ್ತೀಚೆಗೆ ಈ ಮಂಟಪದಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಇತಿಹಾಸ ಮತ್ತು ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ಈ ಮಂಟಪದ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ದುರಸ್ಥಿ ಕಾರ್ಯ ಆರಂಭವಾಗುವ ಮುನ್ನವೇ ಇಡೀ ಐಕ್ಯ ಮಂಟಪ ಪ್ರವಾಹದಿಂದಾಗಿ ಸಂಪೂರ್ಣ ಮುಳುಗಡೆಯಾಗಿದೆ.
ಅಲ್ಲದೆ, ಯಾವುದೇ ಸಂದರ್ಭದಲ್ಲಿ ಕುಸಿದು ನೀರಿನಲ್ಲಿ ಕೊಚ್ಚಿಹೋಗುವ ಭೀತಿಯನ್ನೂ ಉಂಟು ಮಾಡಿದೆ. ಪರಿಣಾಮ ಇಲ್ಲಿನ ಸ್ಥಳೀಯರು ಹಾಗೂ ಶ್ರೀಕ್ಷೇತ್ರದ ಭಕ್ತಾಧಿಗಳ ಮುಖದಲ್ಲಿ ಆತಂಕದ ಛಾಯೆ ಮನೆಮಾಡಿದೆ.