ಬೆಂಗಳೂರು, ಆ.10- ಸಚಿವ ಸಂಪುಟ ರಚನೆ ವಿಳಂಬವಾಗುತ್ತದೆ ಎಂಬ ಅನುಮಾನ ಯಾರಿಗೂ ಬೇಡ. ಶೀಘ್ರವೇ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯೇ ನಾನು ದೆಹಲಿಗೆ ಭೇಟಿ ನೀಡಿದ್ದ ವೇಳೆ ಸಚಿವ ಸಂಪು ರಚನೆ ಮಾಡಬೇಕೆಂದು ತೀರ್ಮಾನಿಸಿದ್ದೆ.
ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ನಿರ್ಧಸಿದ್ದೆ. ಆದರೆ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಹಠಾತ್ ನಿಧನ ಹಾಗೂ ಅದೇ ವೇಳೆ ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಯಿತು. ಆದ್ದರಿಂದ ವಿಳಂಬವಾಗಿದೆಯಷ್ಟೇ ಎಂದು ತಿಳಿಸಿದರು.
ತಕ್ಷಣವೇ ರಾಜ್ಯಕ್ಕೆ ತೆರಳಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ಕೊಡಬೇಕೆಂದು ವರಿಷ್ಠರು ಸೂಚಿಸಿದ್ದರು. ಅದರಂತೆ ನಾನು ದೆಹಲಿಯಿಂದ ಬಂದ ತಕ್ಷಣ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ವಸ್ತುಸ್ಥಿತಿ ತಿಳಿಯಲು ಪ್ರಯತ್ನಿಸಿದ್ದೇನೆ ಎಂದರು.
ಇಂದು ಮತ್ತು ನಾಳೆ ದೆಹಲಿಗೆ ಹೋಗುವುದಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ತದನಂತರ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಆದಷ್ಟು ಶೀಘ್ರ ಸಚಿವ ಸಂಪುಟ ರಚನೆ ಮಾಡುವುದಾಗಿ ಬಿಎಸ್ವೈ ತಿಳಿಸಿದರು.