ಮಳೆ ನಿಲ್ಲಿಸುವಂತೆ ವರುಣನನ್ನು ಪ್ರಾರ್ಥಿಸುತ್ತಿರುವ ಜನತೆ

ಬೆಂಗಳೂರು, ಆ.10- ಮಳೆಗಾಗಿ ಮುಗಿಲು ನೋಡುತ್ತಿದ್ದ, ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದ ಉತ್ತರ ಕರ್ನಾಟಕದ ಜನತೆ ಈಗ ಮಳೆ ನಿಲ್ಲಿಸುವಂತೆ ವರುಣನನ್ನು ಪ್ರಾರ್ಥಿಸುತ್ತಿದ್ದಾರೆ.

ಕಳೆದ 10 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನ ತಮ್ಮ ಪ್ರಾಣ ರಕ್ಷಣೆಗಾಗಿ ಭಗವಂತನ ಮೊರೆಯಿಟ್ಟಿದ್ದಾರೆ. ಮನುಷ್ಯ ಪ್ರಯತ್ನದ ಹೊರತಾಗಿಯೂ ಜನ-ಜಾನುವಾರುಗಳ ರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾಕು ನಿಲ್ಲಿಸು ನಿನ್ನ ಆರ್ಭಟವನ್ನು ಎಂದು ವರುಣನನಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಉಕ್ಕಿ ಹರಿದ ನದಿಗಳು, ಬಾಯ್ತೆರೆದ ಮೃತ್ಯು, ಎಲ್ಲೆಡೆ ಹಾಹಾಕಾರ, ನೀರಿನಲ್ಲಿ ಸಿಲುಕಿದವರ ಆಕ್ರಂಧನ, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರ ಅಳಲು, ಇನ್ನೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹಾಗೂ ತುಂಬಿದ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬರುತ್ತಿರುವ ಕಾರಣ ಮತ್ತಷ್ಟು ಹಳ್ಳಿಗಳು ಜಲಾವೃತಗೊಂಡು ಜನರು ಅತಂತ್ರರಾಗುವ ಆತಂಕ ಎದುರಾಗಿದೆ.

ಜಲಪ್ರಳಯದಿಂದ ನಿನ್ನೆಯವರೆಗೆ 31 ಜನ ಮೃತಪಟ್ಟಿದ್ದು, ಮಂಗಳೂರಿನ ಒಳ್ಚಿಲ್ ಮಸೀದಿ ಬಳಿ ಇರುವ ಹಳ್ಳಕ್ಕೆ ಬಿದ್ದು ಮೌಲ್ವಿ ರಜಾಕ್ (34) ಎಂಬುವವರು ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 32ಕ್ಕೆ ಏರಿದೆ. ಕರಾವಳಿಯಲ್ಲಿ ಮಳೆಗೆ ಇದು ನಾಲ್ಕನೆ ಬಲಿಯಾಗಿದೆ.

ಭೀಮಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯಾದಗಿರಿ ಜಿಲ್ಲೆ ಕೌಳೂರು ಗ್ರಾಮದ ಸಾಹೇಬರೆಡ್ಡಿ ಅವರ ಮೃತದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ.

ನಿರಂತರ ಕಾರ್ಯಾಚರಣೆ ನಡುವೆಯೂ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಬೆಳಗಾವಿ ಜಿಲ್ಲೆ ಶೇ.70ರಷ್ಟು ಜಲಾವೃತವಾಗಿದೆ. ಸಂತ್ರಸ್ತರ ರಕ್ಷಣೆಗೆ, ರಸ್ತೆ-ಸೇತುವೆಗಳ ದುರಸ್ತಿಗೆ, ಕೊಚ್ಚಿಹೋದ ಬದುಕನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ.

ಈ ನಡುವೆ ಜಲ ಪ್ರಳಯದಿಂದ ಸಾವು-ನೋವಿನ ಪ್ರಮಾಣ ದಿನೇ ದಿನೇ ಹೆಚ್ಚಾಗತೊಡಗಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಪರಿಹಾರ ಕೇಂದ್ರಗಳಲ್ಲಿ ಕಾಲ ಹಾಕುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ.

1.5 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಹರಸಾಹಸವಾಗಿದೆ.

ಶಾಲಾ-ಕಾಲೇಜು, ಕಲ್ಯಾಣ ಮಂಟಪ, ಅಂಗನವಾಡಿ ಕೇಂದ್ರಗಳು, ಸರ್ಕಾರಿ ಕಚೇರಿಗಳಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿ ಅಗತ್ಯ ಶೌಚಾಲಯ, ಕುಡಿಯುವ ನೀರು, ಹೊದಿಕೆ, ಹಾಸಿಗೆ, ವಿದ್ಯುತ್, ಔಷಧಿ ವ್ಯವಸ್ಥೆ ಇಲ್ಲದೆ ವೃದ್ಧರು, ಗರ್ಭಿಣಿಯರು ಪರದಾಡುವಂತಾಗಿದೆ.

ಬೆಳಗಾವಿ, ಧಾರವಾಡ, ಬಿಜಾಪುರ, ರಾಯಚೂರು, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ತೆರೆದಿರುವ 327 ಪರಿಹಾರ ಕೇಂದ್ರಗಳಲ್ಲಿ ಕೆಲವನ್ನು ಹೊರತುಪಡಿಸಿದರೆ ಬಹುತೇಕ ಪರಿಹಾರ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಸಿಗದೆ ಜನ ಪರದಾಡುತ್ತಿದ್ದಾರೆ.

ಕಣ್ಣೆದುರೇ ಜನ-ಜಾನುವಾರುಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಿಗೆ ಸೇರಿರುವ ಅದೆಷ್ಟೋ ಮಂದಿ ಅನುಭವಿಸುತ್ತಿರುವ ಸಂಕಷ್ಟ ಹೇಳತೀರದಾಗಿದೆ.

ಉತ್ತರ ಕರ್ನಾಟಕದಲ್ಲಿ, ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆಯ ಆರ್ಭಟ ಇನ್ನೂ ನಿಂತಿಲ್ಲ. ಪ್ರವಾಹದ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಭಾರತೀಯ ವಾಯುಪಡೆ, ನೌಕಾಪಡೆ ಧಾವಿಸಿದ್ದು, ನೂರಾರು ಜನರನ್ನು ರಕ್ಷಿಸಲಾಗಿದೆ.

ಬೆಳಗಾವಿ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮತ್ತಷ್ಟು ಮುಂದುವರಿದು ಈಗಾಗಲೇ ಪ್ರಳಯ ಭೀತಿಯಲ್ಲಿ ಪತರುಗುಟ್ಟಿರುವ ಜನರನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ.

ಕೃಷ್ಣಾ, ಭೀಮಾ ನದಿಗಳಾಗಿದ್ದು, ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮಲಪ್ರಭ, ಘಟಪ್ರಭ, ವೇದಗಂಗಾ, ದೂದ್‍ಗಂಗಾ, ಪಂಚಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ, ವರದಾ, ಬೇಡ್ತಿ, ಕಾಳಿ, ಗಂಗಾವಳಿ ಸೇರಿದಂತೆ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಆಲಮಟ್ಟಿ, ನಾರಾಯಣಪುರ ಸೇರಿದಂತೆ ಹಲವಾರು ಜಲಾಶಯಗಳಿಂದ ಹೊರಹರಿವು ಹೆಚ್ಚಾಗುತ್ತಿದ್ದು, ನದಿಪಾತ್ರದ ಜನರನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಳಿದುಳಿದವರನ್ನು ಬಲವಂತವಾಗಿ ಕರೆದೊಯ್ಯಲಾಗುತ್ತಿದೆ.

ಇತ್ತ ಮೈಸೂರು ಜಿಲ್ಲೆಯಲ್ಲೂ ಕೂಡ ಭಾರೀ ಮಳೆ ಬಿದ್ದು 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಬಹುತೇಕ ಮುಳುಗಡೆಯಾಗಿದೆ. ಪಾಣೆ ಮಂಗಳೂರು ಗ್ರಾಮದಲ್ಲಿ ಸಿಲುಕಿದ್ದ 8 ಜನರನ್ನು ರಕ್ಷಿಸಲಾಗಿದೆ.

ಬಂಟ್ವಾಳದಲ್ಲಿರುವ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮನೆಯೂ ಮುಳುಗಡೆಯಾಗಿದ್ದು, ರಕ್ಷಣಾ ಸಿಬ್ಬಂದಿ ಪೂಜಾರಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ವ್ಯಾಪ್ತಿಯ ಚಂದೂರು, ಯಡೂರು, ಸಪ್ತಸಾಗರ, ಮುನ್ನುರ್ಗಿ, ಜಂಜರವಾಡ ಸೇರಿದಂತೆ 40 ಗ್ರಾಮಗಳು ನಡುಗಡ್ಡೆಗಳಾಗಿವೆ. ನಾಲ್ಕು ಸೇನಾ ಹೆಲಿಕಾಪ್ಟರ್‍ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಬೆಳಗಾವಿ, ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳೆಯ ಸುಮಾರು 200 ಕುಟುಂಬಗಳು ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿವೆ. ತಮ್ಮ ಮನೆಗಳೆಲ್ಲ ಜಲಾವೃತವಾಗಿ ಅತ್ತ ಪರಿಹಾರ ಕೇಂದ್ರಗಳಿಗೂ ಸ್ಥಳಾಂತರವಾಗದೆ ಇತ್ತ ಮನೆಯಲ್ಲಿಯೂ ಆಶ್ರಯ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊರನಾಡು-ಕಳಸ ಮಾರ್ಗಮಧ್ಯೆ ರಸ್ತೆ ಕುಸಿದಿದೆ. ನೇತ್ರಾವತಿ ನದಿ ತೀರದ ಬಹುತೇಕ ಗ್ರಾಮಗಳು ಮುಳುಗಡೆಯಾಗಿವೆ.

ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿಪಾತ್ರದ 10ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಹೊನ್ನಾಳಿಯ ತುಂಗಭದ್ರಾ ನದಿ ಮಟ್ಟ ಹೆಚ್ಚಿದ್ದು, ಹರಪನಹಳ್ಳಿ, ಹರಿಹರ ನದಿಪಾತ್ರದ ಮನೆಗಳು ಜಲಾವೃತವಾಗಿವೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ.

ನಿನ್ನೆಯಷ್ಟೆ ಕೊಡಗಿನ ಕೋರಂಗಾಲ ಹಾಗೂ ವಿರಾಜ್‍ಪೇಟೆಯ ತೋರಾ ಪ್ರದೇಶದ ಭೂ ಕುಸಿತದಲ್ಲಿ ಏಳು ಜನ ಮೃತಪಟ್ಟಿದ್ದು, ಮತ್ತೆ ಮಳೆ ಮುಂದುವರಿದಿರುವುದರಿಂದ ಮತ್ತಷ್ಟು ಆತಂಕ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ