ಬೆಂಗಳೂರು,ಆ.10- ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸರ್ಕಾರವಿಲ್ಲ. ಪ್ರಧಾನಿ ಅಥವಾ ಕೇಂದ್ರ ಗೃಹಸಚಿವರು ಕೂಡಲೇ ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ವೈಮಾನಿಕ ಸಮೀಕ್ಷೆ ನಡೆಸಿ ವಿಶೇಷ ಪ್ಯಾಕೇಜ್ ಮಾಡಬೇಕು. ಕೇಂದ್ರದಿಂದ ತಂಡವನ್ನು ಕಳುಹಿಸಿ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕನಾಗಿ ನನ್ನ ಒಂದು ತಿಂಗಳ ಸಂಬಳ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದ ಅವರು, ನಮ್ಮ ಮೆಡಿಕಲ್ ಕಾಲೇಜಿನಿಂದ ಸಂತ್ರಸ್ತರ ನೆರವಿಗೆ ವೈದ್ಯಕೀಯ ತಂಡ ಕಳುಹಿಸಲು ನಾವು ತಯಾರಿದ್ದೇವೆ ಎಂದರು.
ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಹಾಗೂ ಸರಕಾರ ಬೀಳಿಸಲು ಇದ್ದ ಆಸಕ್ತಿ ಸಂಪುಟ ರಚನೆ ಯಾಕಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇರುವುದರಿಂದ ಕಾಯುತ್ತಿದ್ದಾರೆ. ಅದನ್ನು ಬಹಿರಂಗಪಡಿಸಿ ಎಂದ ಅವರು, ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.
ಸರಕಾರ ಇಲ್ಲವೆಂದರೆ ಅಧಿಕಾರಿಗಳು ಆರಾಮಾಗಿ ಕುಳಿತಿರುತ್ತಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್ ಮಾಡಿಲ್ಲ. ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ನನ್ನ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇನೆ. ಕಾಂಗ್ರೆಸ್ನ ಎಲ್ಲಾ ಶಾಸಕರು ನೆರೆ ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರಲ್ಲಿ ವಿನಂತಿಸುವುದಾಗಿ ಹೇಳಿದರು.
ಈ ಸರಕಾರ ಹೇಗೆ ಕೆಲಸ ಮಾಡುತ್ತೆ ಎಂದು ಗಮನಿಸುತ್ತೇನೆ. ಕಾನೂನು ಬಾಹಿರವಾಗಿ ಏನೇ ತೀರ್ಮಾನವಾದರೂ ಅದನ್ನು ಜನರ ಗಮನಕ್ಕೆ ತರುತ್ತೇವೆ. ನಮ್ಮ ಸರಕಾರ ಯಾವುದೂ ಕಾನೂನು ಬಾಹಿರವಾಗಿ ಮಾಡಿಲ್ಲ. ಬಿಬಿಎಂಪಿಯ ಕೌನ್ಸಿಲ್ನಲ್ಲೂ ಬಿಜೆಪಿ ಸದಸ್ಯರು ಇದ್ದಾರೆ. ಅವರು ಒಪ್ಪಿಕಳುಹಿಸಿದ ಬಜೆಟ್ನ್ನೇ ನಾವು ಒಪ್ಪಿದ್ದೇವೆ. ಆದರೆ ಯಾಕೆ ಅದನ್ನು ತಡೆದಿದ್ದಾರೆ ಗೊತ್ತಿಲ್ಲ. 13,500 ಸಾವಿರ ಕೋಟಿ ರೂ. ಇದ್ದ ಬಜೆಟ್ ಕಡಿಮೆ ಮಾಡಿದ್ದೇವೆ. ಯಾಕೆ ತಡೆ ಹಿಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.