ಬೆಂಗಳೂರು, ಆ.10- ರಾಜ್ಯದ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ಮತ್ತಿರರ ಕಡೆ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಆರು ಸಾವಿರ ಕೋಟಿ ರೂ. ನಷ್ಟವಾಗಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ತತ್ಕ್ಷಣವೇ ಮೂರು ಸಾವಿರ ಕೋಟಿಯಷ್ಟು ಹಣ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೂವತ್ತು ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಮನೆ ಮಠ, ಆಸ್ತಿಪಾಸ್ತಿ ನಷ್ಟವಾಗಿದೆ. ಕೂಡಲೇ ಕನಿಷ್ಠ ಪಕ್ಷ ಮೂರು ಸಾವಿರ ಕೋಟಿಯಾದರೂ ನೆರವು ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತರಾಮನ್ ಅವರಿಗೆ ಪತ್ರ ಬರೆದಿರುವುದಾಗಿ ಯಡಿಯೂರಪ್ಪ ತಿಳಿಸಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, 16 ಜಿಲ್ಲೆಗಳ 80 ತಾಲ್ಲೂಕುಗಳನ್ನು ಪ್ರವಾಹಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲು ಭಾರೀ ಪ್ರಮಾಣದ ಆರ್ಥಿಕ ನೆರವು ಅಗತ್ಯವಿರುವುದರಿಂದ ಕೇಂದ್ರ ಸರ್ಕಾರ ತಮ್ಮ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಕಳೆದ ಬಾರಿ ದೆಹಲಿಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ, ಗೃಹ ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೂ ಮತ್ತಷ್ಟು ನೆರವಿನ ಅಗತ್ಯವಿದೆ ಎಂದು ಬಿಎಸ್ವೈ ಹೇಳಿದರು.
ಕೇಂದ್ರದಿಂದ ಪರಿಹಾರ ನೀಡುವಲ್ಲಿ ನಮಗೆ ಯಾವುದೇ ರೀತಿಯ ವಿಳಂಬವಾಗಿಲ್ಲ. ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟ ಕೂಡಲೇ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆ, ದೋಣಿಗಳು, ಎನ್ಡಿಆರ್ಎಫ್ ತಂಡ, ಹೆಲಿಕಾಫ್ಟರ್ಗಳನ್ನು ಕಳುಹಿಸಿಕೊಟ್ಟಿದೆ. ಕೇವಲ 2-3 ಗಂಟೆಯಲ್ಲೇ ಸ್ಪಂದಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೇಂದ್ರದಿಂದ ನರೇಗಾ ಯೋಜನೆಯಡಿ 856 ಕೋಟಿ, ಎಸ್ಡಿಆರ್ಎಫ್ ಯೋಜನೆಯಡಿ 126 ಕೋಟಿ, ಪರಿಹಾರ ಕಾರ್ಯಕ್ಕೆ ಭಾರತೀಯ ವಾಯುಪಡೆಗೆ ಸೇರಿದ 4 ಹೆಲಿಕಾಫ್ಟರ್, ದೋಣಿಗಳು, ಸೇನೆ ಸೇರಿದಂತೆ ಎಲ್ಲಾ ರೀತಿಯ ನೆರವು ಸಿಕ್ಕಿದೆ. ಪ್ರತಿ ದಿನದ ಮಾಹಿತಿಯನ್ನು ನಾವು ಕೇಂದ್ರಕ್ಕೆ ನೀಡುತ್ತಿದ್ದೇವೆ. ಹಣಕಾಸು ಸಚಿವರಾದ ನಿರ್ಮಲಾಸೀತರಾಮನ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದರೆ ಪ್ರಧಾನಿ ಅವರಿಗೆ ಇಲ್ಲಿನ ಪರಿಸ್ಥಿತಿ ಅರ್ಥವಾಗಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಹದಿನಾರು ಜಿಲ್ಲೆಗಳಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದಾಗಿ ಈವರೆಗೂ ಅಂದಾಜು ಲೆಕ್ಕಾಚಾರದಂತೆ ಆರು ಸಾವಿರ ಕೋಟಿ ನಷ್ಟವಾಗಿದೆ. ಒಂದು ತಿಂಗಳ ನಂತರ ಸಮೀಕ್ಷೆ ನಡೆಸಿದ ಬಳಿಕ ಇದು ಇನ್ನೂ ಹೆಚ್ಚಾಗಬಹುದು. ನಾಲ್ಕೂವರೆ ದಶಕಗಳ ನಂತರ ಇಂತಹ ಭೀಕರ ಪ್ರವಾಹ ಉಂಟಾಗಿದೆ ಎಂದು ವಿಷಾದಿಸಿದರು.
ಈವರೆಗೂ 24 ಮಂದಿ ಸಾವನ್ನಪ್ಪಿದ್ದಾರೆ. ಕೊಡಗು ಸೇರಿದಂತೆ ಬೇರೆ ಬೇರೆ ಕಡೆ ಸಂಭವಿಸಿದ ಘಟನೆಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮೃತಪಟ್ಟವರ ಕುಟುಂಬಕ್ಕೆ 5ಲಕ್ಷ ಪರಿಹಾರ, ಜಾನುವಾರು ಕಳೆದುಕೊಂಡಿದ್ದರೆ 35 ಸಾವಿರ, ಸಣ್ಣಪುಟ್ಟ ಕರುಗಳಿಗೆ 15ಸಾವಿರ ಪರಿಹಾರ ನೀಡಿದ್ದೇವೆ ಎಂದು ವಿವರಿಸಿದರು.
ಒಟ್ಟು 1024 ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ. 2,35,105 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದೇವೆ. 222 ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. 624 ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದು, ಜನರಿಗೆ ಆಹಾರ, ವಸತಿ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ ಎಂದು ಹೇಳಿದರು.
ಒಟ್ಟು 3,22,448 ಕೃಷಿ ಹೆಕ್ಟೇರ್ ಭೂಮಿಯಲ್ಲಿದ್ದ ಬೆಳೆ ನಷ್ಟವಾಗಿದೆ. ಇದೂ ಕೂಡ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 12,651 ಮನೆಗಳು ನೀರಿನಲ್ಲಿ ಮುಳುಗಿವೆ. ಇವರೆಲ್ಲರಿಗೂ ಹೊಸದಾಗಿ ಮನೆ ಕಟ್ಟಿಸಿಕೊಡಬೇಕು. ನನ್ನ ಮುಂದೆ ಇನ್ನೂ ಬಹುದೊಡ್ಡ ಸವಾಲುಗಳಿವೆ. ಭಗವಂತನ ದಯೆಯಿಂದ ಮೂರ್ನಾಲ್ಕು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹದ ನಂತರ ಹಾಸನ, ಶಿವಮೊಗ್ಗ, ಕೊಡಗು, ಮಡಿಕೇರಿ, ದಕ್ಷಿಣ ಕನ್ನಡದಲ್ಲೂ ಪ್ರವಾಹ ಸಂಭವಿಸಿದೆ. ಈ ಭಾಗಗಳಿಗೆ ನಾನು ಭೇಟಿ ಕೊಡಬೇಕೆಂದು ತೀರ್ಮಾನಿಸಿದ್ದೆ. ಆದರೆ, ಆ ಭಾಗದಲ್ಲಿ ಇನ್ನೂ ಮಳೆಯಾಗುತ್ತಿರುವುದರಿಂದ ಹೆಲಿಕಾಫ್ಟರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸಾಧ್ಯವಾದರೆ ಇಂದು ಅಥವಾ ನಾಳೆ ರಸ್ತೆ ಮೂಲಕ ತೆರಳಿ ಪರಿಶೀಲಿಸುವುದಾಗಿ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆಯಾಗದಿದ್ದರೂ ನಮ್ಮ ಪಕ್ಷದಿಂದ ಮೂರು ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬರೂ ಎಲ್ಲಾ ಕಡೆ ಭೇಟಿ ನೀಡುತ್ತಿದ್ದಾರೆ. ಸಂಸದರು, ಶಾಸಕರು ಅವರವರ ಕ್ಷೇತ್ರಗಳಲ್ಲೇ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಶಾಸಕರೂ ಕೂಡ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿ ನಾನು ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರಸ್ತುತ ಪ್ರವಾಹ ಪೀಡಿತ ಸ್ಥಳಗಳಲ್ಲಿ ಎನ್ಡಿಆರ್ಎಫ್ನ 20 ತಂಡ, 11 ಸೇನಾ ತಂಡ, ದೋಣಿಗಳು, ಅಗ್ನಿಶಾಮಕ ಪಡೆ, ಎಸ್ಡಿಆರ್ಎಫ್ನ 2 ತಂಡ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು 100ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಸಂತ್ರಸ್ತರು ಎದೆಗುಂದಬಾರದು. ವದಂತಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮೊಂದಿಗೆ ಇಡೀ ಕರ್ನಾಟಕ ಜನತೆ ಹಾಗೂ ಸರ್ಕಾರವಿದೆ. ಎಷ್ಟೇ ಹಣ ಖರ್ಚಾದರೂ ಪರಿಹಾರ ಕಾರ್ಯವನ್ನು ನಿಭಾಯಿಸುವುದಾಗಿ ಬಿಎಸ್ವೈ ವಾಗ್ದಾನ ಮಾಡಿದರು.
ನೌಕರರ ಸಂಘದಿಂದ ನೆರವು:
ರಾಜ್ಯದ ವಿವಿಧೆಡೆ ಸಂಭವಿಸಿರುವ ಪ್ರವಾಹಕ್ಕೆ ಕರ್ನಾಟಕ ಸರ್ಕಾರಿ ನೌಕರರ ಸಂಘ ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ಸಂಘದ ಇತರೆ ಪದಾಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡಿದರು.
ಸುಮಾರು 170ರಿಂದ 200 ಕೋಟಿ ಸಿಗಲಿದ್ದು, ಪ್ರಸಕ್ತ ತಿಂಗಳಿನಲ್ಲೇ ಈ ವೇತನವನ್ನು ಕಡಿತಗೊಳಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ಸಾರಿಗೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ.