ಬೆಂಗಳೂರು.ಆ.10-ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಪ್ರಪಂಚದಲ್ಲೇ ಉತ್ತುಂಗಕ್ಕೇರಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಹಾಗೂಸ್ಪೇಸ್ ಕಮೀಷನ್ ಸದಸ್ಯ ಎ.ಎಸ್.ಕಿರಣ್ಕುಮಾರ್ ಹೇಳಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ನೂತನ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಂದ್ರಯಾನ ಉಡಾವಣೆ ಮೂಲಕ ಜಗತ್ತೇ ನಮ್ಮತ್ತ ತಿರುಗುವಂತೆ ಮಾಡಲಾಗಿದೆ ಎಂದರು.
ಇದೇ 14ರಂದು ಮತ್ತೊಂದು ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಭಾರತದ ವಿಜ್ಞಾನಿಗಳು ಯಾವುದರಲ್ಲೂ ಕಡಿಮೆ ಇಲ್ಲ. ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಅನ್ವೇಷಣಗಳತ್ತ ಮುಖ ಮಾಡಬೇಕೆಂದು ಅವರು ಸಲಹೆ ನೀಡಿದರು.
ನಮ್ಮಲ್ಲಿ ಯುವ ಸಂಪನ್ಮೂಲ ಹೆಚ್ಚಾಗಿದ್ದು, ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಬಲಿಷ್ಠವಾಗಲಿದೆ ಎಂದು ಅವರು ಹೇಳಿದರು.
ನಿಟ್ಟೆ ಮಹಾವಿದ್ಯಾಲಯದಂತಹ ವಿವಿಗಳು ಅನ್ವೇಷಣೆ ಮತ್ತು ಸಂಶೋಧನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕಿರಣ್ಕುಮಾರ್ ಸಲಹೆ ನೀಡಿದರು.
ಚಿನ್ನದ ಪದಕ: ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಎಸ್.ಸ್ಪೂರ್ತಿ ಅವರು ನಿಟ್ಟೆ ಗುಲಾಬಿ ಶೆಟ್ಟಿ ಸ್ಮರಣಾರ್ಥ ಚಿನ್ನದ ಪಕದವನ್ನು ಸ್ವೀಕರಿಸಿದರು.
ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗಡೆ ಸ್ಮರಣಾರ್ಥ ಚಿನ್ನದ ಪದಕ, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಎಸ್.ಮೇಘನ ಅವರಿಗೆ ಲಭಿಸಿತು.
ಅತ್ಯುತ್ತಮ ವಿದ್ಯಾರ್ಥಿಗೆ ಮೀಸಲಿರುವ ಕೆ.ಎಸ್.ಹೆಗಡೆ ಸ್ಮರಣಾರ್ಥ ಚಿನ್ನದ ಪದಕ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಚಿಂತನ್ ಡಿಸೋಜ ಅವರಿಗೆ ದೊರೆತಿದೆ.
ಬಿಜಯ್ ಮೈನಲಿ-ಸಿವಿಲ್ ಇಂಜಿನಿಯರಿಂಗ್, ಚಂದನ.ಎಸ್-ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ನರೇಂದ್ರಚೌಲಗೈನ್-ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಎಂ.ಚರಿತಾ ಮತ್ತು ರಜತ್.ಎನ್ – ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಅರ್ಪಿತ ನಾಯಕ್- ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಮನಮೋಹನ್ ಠಾಕೂರ್- ಮೆಕಾನಿಕಲ್ ಇಂಜಿನಿಯರಿಂಗ್, ಶ್ರಾವಣಿ ಕೃಷ್ಣ.ಬಿ ಮತ್ತು ಮೇಘ.ಎಂ- ಎಂಬಿಎ , ಅಶೋಕ್.ಕೆ.ಎಸ್-ಎಂಸಿಎ, ಹರ್ಷಿತಾ.ಆರ್, ಸರಳ ಮಡೋಲಿ, ಯಾಮಿನಿ.ಎಂ, ಅಮಿತ.ಪಿ.ಕೆ, ಅನಿತ.ವಿ.ಎಂ -ಎಂಟೆಕ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿವಿಯ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ, ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ವಿನಯ್ ಹೆಗಡೆ, ಮಂಗಳೂರು ವಿವಿ ಕುಲಪತಿ ಎನ್.ವಿ.ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.