ಇಸ್ಲಾಮಾಬಾದ್, ಆ.9- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಭಾರತ ಸರ್ಕಾರದ ವಿರುದ್ಧ ಪಾಕಿಸ್ತಾನ ಮತ್ತೊಂದು ಸೇಡಿನ ಕ್ರಮ ಅನುಸರಿಸಿದೆ.
ಪಾಕಿಸ್ತಾನದ್ಯಂತ ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ರದ್ದುಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ.
ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳು, ನಾಟಕಗಳು ಮತ್ತು ಕಿರುಚಿತ್ರ ಅಥವಾ ಯಾವುದೇ ಇಂಡಿಯನ್ ಕಂಟೆಂಟ್ಗಳ ಪ್ರದರ್ಶನಕ್ಕೆ ಅವಕಾಶ ನೀಡುದಿಲ್ಲ ಎಂದು ಪಾಕ್ ಪ್ರಧಾನಮಂತ್ರಿ ಮಾಧ್ಯಮ ಸಲಹೆಗಾರ ಫಿರ್ದೋಸ್ ಆಶಿಕ್ ಆಹ್ವಾನ್ ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಗಡಿಭಾಗದಲ್ಲಿರುವ ವಾಘಾ ಸರಹದ್ದಿನ ಮೂಲಕ ಆಫ್ಘಾನಿಸ್ತಾನವೂ ಭಾರತದಿಂದ ಆಮದು ಮಾಡಿಕೊಳ್ಳುವ ಅಗತ್ಯ ವಸ್ತುಗಳ ಮಾರ್ಗವನ್ನು ಬಂದ್ ಮಾಡುವುದಾಗಿ ಪಾಕಿಸ್ತಾನ ನಿನ್ನೆಯಷ್ಟೆ ಘೋಷಿಸಿತ್ತು.
ಇದರೊಂದಿಗೆ ಭಾರತ ಮತ್ತು ಆಫ್ಘಾನ್ ನಡುವೆ ವಾಣಿಜ್ಯ-ವ್ಯಾಪಾರ-ವಹಿವಾಟು ಬಂದಾಗಲಿದ್ದು, ಪ್ರತಿಕೂಲ ಪರಿಣಾಮ ಉಂಟಾಗಲಿದೆ.
ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ವಾಣಿಜ್ಯ ಸಲಹೆಗಾರ ಅಬ್ದುಲ್ ರಜಾಖ್ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿ ಇನ್ನು ಮುಂದೆ ವಾಘ ಗಡಿ ಮೂಲಕ ಭಾರತ ಮತ್ತು ಆಫ್ಘಾನಿಸ್ತಾನ ವ್ಯಾಪಾರ-ವಹಿವಾಟಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಾರ್ಗವು ಇನ್ನು ಮುಂದೆ ದ್ವಿಪಕ್ಷೀಯ ವಹಿವಾಟು ಮಾರ್ಗವಾಗಲಿದೆ. ಹೊರತು ತ್ರಿಪಕ್ಷೀಯ ಮಾರ್ಗವಾಗಿ ಮುಂದುವರೆಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
370ನೇ ವಿಧಿ ರದ್ಧತಿ ನಂತರ ಭಾರತದ ವಿರುದ್ಧ ಸೇಡಿನ ಕ್ರಮವಾಗಿ ಪಾಕಿಸ್ತಾನ ನಿನ್ನೆಯಷ್ಟೆ ರಾಯಭಾರಿಯನ್ನು ಇಸ್ಲಾಮಾಬಾದ್ನಿಂದ ಉಚ್ಛಾಟಿಸಿ ದೆಹಲಿಯೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತ್ತು.