ಬೆಂಗಳೂರು, ಆ.9- ಕಾಂಗ್ರೆಸ್ ಈವರೆಗೂ ನಾಯಕರುಗಳ ಪಕ್ಷವಾಗಿದ್ದು ಈಗ ಬದಲಾವಣೆ ಆಗಬೇಕಿದೆ, ಜನಸಾಮಾನ್ಯರ ಬಳಿ ಹೋಗಿ ಅವರ ನಡುವೆ ಬೆಳೆಯುವ ಪಕ್ಷವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅಭಿಪ್ರಾಯಪಟ್ಟರು.
ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ 77ನೆ ವರ್ಷದ ವಾರ್ಷಿಕೋತ್ಸವ ಆಚರಣೆಯ ವೇಳೆ ಮಾತನಾಡಿದ ಬಹುತೇಕ ನಾಯಕರು ಕಾಂಗ್ರೆಸ್ನ ಇಂದಿನ ಸ್ಥಿತಿಗತಿಯ ಆತ್ಮಾವಲೋಕನ ಮಾಡಿಕೊಂಡರು.
ದಿನೇಶ್ ಗುಂಡೂರಾವ್ ಮಾತನಾಡಿ, ಕ್ವಿಟ್ ಇಂಡಿಯಾ ಚಳುವಳಿಯನ್ನು ಗಾಂಧಿಜೀ ಆರಂಭಿಸಿದಾಗ ಮುಸ್ಲಿಮ್ ಲೀಗ್ ಮತ್ತು ಆರ್ಎಸ್ಎಸ್ ವಿರೋಧ ಮಾಡಿದ್ದವು. ಬ್ರಿಟಿಷರ ಜೊತೆ ಸೇರಿಕೊಂಡು ಸ್ವತಂತ್ರ ಹೋರಾಟಕ್ಕೆ ಅಡ್ಡಿಯಾಗಿದ್ದವು. ಆಗಿನ ಸಂದರ್ಭದಲ್ಲಿ ಕಾಂಗ್ರೆಸ್ನ ಎಲ್ಲ ನಾಯಕರು ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಬಂದಾಗ ಮುಸ್ಲಿಮ್ ಲೀಗ್ ಮತ್ತು ಹಿಂದೂ ಮಹಾಸಭಾ ಮೈತ್ರಿ ಸರ್ಕಾರ ಮಾಡಿಕೊಂಡು ಬ್ರಿಟಿಷರ ಬೆಂಬಲಕ್ಕೆ ನಿಂತಿದ್ದರು, ಆದರೆ ಈಗ ಅದೇ ಜನ ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದರಿಂದ ಮುಂದೆ ಯಾವ ರೀತಿಯ ಪರಿಣಾಮ ಆಗಬಹುದು ಎಂಬುದನ್ನು ಸದ್ಯಕ್ಕೆ ಊಹಿಸುವುದು ಕಷ್ಟ. ಆದರೆ ಬಿಜೆಪಿ ಸರ್ವಾಧಿಕಾರಿ ಧೋರಣೆಯಿಂದ ಕಾಶ್ಮೀರವನ್ನು ದಿಗ್ಭಂದನದಲ್ಲಿ ಇಟ್ಟು ತೀರ್ಮಾನ ತೆಗೆದುಕೊಂಡಿದ್ದು ಸರಿಯಲ್ಲ, ಹಿಂದೆ ನೋಟು ಅಮಾನೀಕರಣದಲ್ಲೂ ಇದೇ ರೀತಿಯ ಧೋರಣೆ ಅನುಸರಿಸಲಾಗಿತ್ತು ಅದರಿಂದ ದೇಶದ ಆರ್ಥಿಕತೆ ಹಾಳಾಯಿತು. ಕೆಲವು ಕಂಪನಿಗಳು ಮುಚ್ಚಿ ಹೋದವು, ಬ್ಯಾಂಕ್ಗಳು ಸಾಲ ಕೊಡುತ್ತಿಲ್ಲ, ನಿರುದ್ಯೋಗ ಹೆಚ್ಚಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಅವರು ಭಾಷಣದಿಂದ ಜನರನ್ನು ಮರುಳು ಮಾಡುತ್ತಾರೆ, ಕಾಂಗ್ರೆಸ್ಸಿಗರು ಒಳ್ಳೆ ಕೆಲಸಗಳನ್ನು ಜನರಿಗೆ ತಲುಪಿಸಲು ವಿಪಲರಾಗಿದ್ದೇವೆ, ಮೋದಿ ಐದು ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ ಆದರೂ ದೇಶದಲ್ಲಿ ಸುಧಾರಣೆಯಾಗುತ್ತಿದೆ ಎಂಬ ಭ್ರಮೆ ಹುಟ್ಟಿಸುತ್ತಿದ್ದಾರೆ, ಭಾವನಾತ್ಮಕವಾಗಿ ಜನರನ್ನು ಯಾಮಾರಿಸಲಾಗುತ್ತಿದೆ. ಕಾಂಗ್ರೆಸ್ ಈ ಸಂದರ್ಭದಲ್ಲಿ ಬಲಗೊಳ್ಳಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯ. ಈಗಲೂ ನಮಗೆ ಓಟು ಹಾಕುವ ಜನರಿದ್ದಾರೆ, ನಾಯಕರ ಬೇಕು, ಬೇಡಗಳನ್ನು ಈಡೇರಿಸುವ ಬದಲಾಗಿ ಇನ್ನೂ ಮುಂದೆ ಜನಸಾಮಾನ್ಯರಿಗೆ ಸ್ಪಂದಿಸುವ ಪಕ್ಷವಾಗುವ ಮೂಲಕ ನಾವು ಬಲಗೊಳ್ಳಬೇಕು. ಕಾಂಗ್ರೆಸ್ ಅನ್ನು ಮುಗಿಸಿದರೆ ನಮಗೆ ಎದುರಾಳಿಗಳೇ ಇಲ್ಲವೆಂದು ವೇಗವಾಗಿ ಹೋಗುತ್ತಿರುವ ಬಿಜೆಪಿಗೆ ಪಾಠ ಕಲಿಸಬೇಕು.
ಸುಪ್ರೀಂಕೋರ್ಟ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಇಂದು ಬಿಜೆಪಿ ಹಿಡಿತದಲ್ಲಿದೆ, ನಾವು ಹೋರಾಟಗಳ ಮೂಲಕ ಮತ್ತೆ ಶಕ್ತಿಶಾಲಿಯಾಗಬೇಕು, ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.
ಜಮ್ಮು ಕಾಶ್ಮೀರದ 370 ವಿಷಯವಾಗಿ ಸದನದ ಒಳಗೆ ಹೊರಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿವೆ, ಕಾಂಗ್ರೆಸ್ಸಿಗರಿಗೆ ಈ ಬಗ್ಗೆ ಸ್ಪಷ್ಟತೆ ಬೇಕಿದೆ, ಆಗ ಮಾತ್ರ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಸಾಧ್ಯ ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಮಾತನಾಡಿ, ಸ್ವತಂತ್ರ ನಂತರ ಕಾಶ್ಮೀರದ ಎಲ್ಲಾ ಪಕ್ಷಗಳು ಭಾರತದೊಂದಿಗೆ ಸೇರಲು ವಿರೋಧ ವ್ಯಕ್ತಪಡಿಸಿದಾಗ ಅವರ ಮನವೊಲಿಸಲು ಗೋಪಾಲಐಯ್ಯರ್ ನೇತೃತ್ವದಲ್ಲಿ ಸಮಿತಿ ರಚಿಸಿ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 370 ಪರಿಚ್ಛೇದವನ್ನು ಬಳಸಿಕೊಳ್ಳಲಾಯಿತು. ಕಾಶ್ಮೀರ ಸುಧಾರಣೆ ಆದ ನಂತರ ಅದನ್ನು ಬದಲಾಯಿಸಲು ಅವಕಾಶವಿದೆ. ಆದರೆ ಇತಿಹಾಸ ತಿಳಿದುಕೊಳ್ಳದೆ ಕಾಂಗ್ರೆಸ್ಸಿಗರೇ ಮೋದಿ ಅವರ ಸರ್ಕಾರದ ನಿರ್ಣಯಗಳನ್ನು ಬೆಂಬಲಿಸಿ ಮಾತನಾಡುತ್ತಿದ್ದಾರೆ, ಕಾಂಗ್ರೆಸ್ ವಕ್ತಾರರೇ ಬೆಂಬಲ ವ್ಯಕ್ತಪಡಿಸಿದರೆ ಸತ್ಯ ಹೇಳುವವರೂ ಯಾರು? ಕಾಲಕಾಲಕ್ಕೆ ಅಭಿವೃದ್ಧಿ ದೃಷ್ಟಿಯಿಂದ 370,371 ಎಬಿಸಿಡಿಯಿಂದ ಜೆವರೆಗೂ ವಿವಿಧ ಪ್ರಾಂತ್ಯಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ, ಇವುಗಳೆಲ್ಲವನ್ನೂ ರದ್ದು ಮಾಡುತ್ತೇವೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಾಡಿದ ತಪ್ಪು ನಿರ್ಣಯಗಳು ಎಂದು ಬಿಜೆಪಿಯವರು ವಾದಿಸಲುಬಹುದು, ಕಾಂಗ್ರೆಸ್ ಅವರು ಇತಿಹಾಸವನ್ನು ತಿಳಿದುಕೊಳ್ಳಬೇಕು, ಪಕ್ಷ ನಾಯಕರುಗಳಿಗೆ, ಕಾರ್ಯಕರ್ತರುಗಳಿಗೆ ಸತ್ಯಾಂಶವನ್ನು ತಿಳಿಸಲು ಚಿಂತನಾ-ಮಂಥನಗಳನ್ನು ಏರ್ಪಡಿಸಬೇಕೆಂದು ಹೇಳಿದರು.
ಸಿಇಟಿ ಮತ್ತು ರಾಜ್ಯದ ನೀರಾವರಿಗಾಗಿ ನಾನಾ ಅಣ್ಣೆಕಟ್ಟುಗಳು ನಿರ್ಮಾಣವಾಗಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ಕಾಂಗ್ರೆಸ್ಸಿಗರೇ ನಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದಿಲ್ಲ. ಯಾರೇ ಮುಖ್ಯಮಂತ್ರಿಯಾಗಿದ್ದರೂ ಪರವಾಗಿಲ್ಲ ಅವರ ಸಾಧನೆಗಳನ್ನು ಪಕ್ಷದ ನಾಯಕರು ಹೇಳಿಕೊಳ್ಳಬೇಕು ಎಂದು ಹೇಳಿದರು.
ಸ್ವತಂತ್ರ ಹೋರಾಟದಲ್ಲಿ ಹಿಂದೂ ಮಹಾಸಭಾ ವಿರೋಧ ಮಾಡಿದ್ದಷ್ಟೇ ಅಲ್ಲ, ಬ್ರಿಟಿಷರ ಮಾಹಿತಿದಾರರಾಗಿ ಕೆಲಸ ಮಾಡಿ ಸ್ವತಂತ್ರ ಹೋರಾಟಗಾರರ ಕೊಲೆಗೂ ಕಾರಣವಾಗಿತ್ತು ಎಂದು ಮೊಯ್ಲಿ ಆರೋಪ ಮಾಡಿದರು.
ಮಾಜಿ ಸಚಿವೆ ರಾಣಿಸತೀಶ್, ಮುಖಂಡರಾದ ಪ್ರಕಾಶ್ ರಾಥೋಡ್, ಟಿ.ವಿ.ಮಾರುತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.