ಬೆಂಗಳೂರು, ಆ.9- ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಎಆರ್ಎಸ್, ಹೇಮಾವತಿ ಜಲಾಶಯಗಳು ಭರ್ತಿಯಾಗುವ ಆಶಾಭಾವನೆ ಮೂಡಿಸಿವೆ. ಈಗಾಗಲೇ ಹಾರಂಗಿ ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕೆಆರ್ಎಸ್ ಜಲಾಶಯಕ್ಕೆ 51 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಕಬಿನಿ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ನೀರನ್ನು ಕಪಿಲ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯದಿಂದ ನದಿಗೆ ಬಿಡುವ ನೀರನ್ನು ನಿಲ್ಲಿಸಲಾಗಿದೆ.
ಕೆಆರ್ಎಸ್ ಜಲಾಶಯದ ಗರಿಷ್ಠ ಸಾಮಥ್ರ್ಯ 124.80 ಅಡಿಗಳಾಗಿದ್ದು, ಇಂದು 98 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಸಂಜೆ ವೇಳೆಗೆ 100 ಅಡಿ ದಾಟುವ ಸಾಧ್ಯತೆಗಳಿವೆ.
ಕೊಡಗು ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ ಸೇರಿದಂತೆ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹಾರಂಗಿ ಜಲಾಶಯಕ್ಕೆ 25000 ಕ್ಯೂಸೆಕ್ಸ್ಗೂ ಹೆಚ್ಚು ಒಳಹರಿವಿದ್ದು, ಜಲಾಶಯದಿಂದ 16 ಸಾವಿರಕ್ಕೂ ಹೆಚ್ಚು ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. 2853.24 ಅಡಿ ಸಾಮಥ್ರ್ಯದ ಈ ಜಲಾಶಯ ಭರ್ತಿಯಾಗಿದೆ.
ಕಬಿನಿ ಜಲಾಶಯಕ್ಕೆ 90 ಸಾವಿರಕ್ಕೂ ಕ್ಯೂಸೆಕ್ಸ್ ಹೆಚ್ಚು ನೀರು ಹರಿದುಬರುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಪ್ರಮಾಣದ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗಿದೆ. ಹೀಗಾಗಿ ಕಪಿಲ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಜಲಾಶಯದ ನೀರಿನ ಸಂಗ್ರಹದ ಗರಿಷ್ಠ ಸಾಮಥ್ರ್ಯ 2284 ಅಡಿಗಳಾಗಿದ್ದು, ಇಂದು 2281.5 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಒಳಹರಿವು ಹೆಚ್ಚಿರುವುದರಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಸಂಜೆಯ ವೇಳೆಗೆ ಒಳ-ಹೊರ ಹರಿವು ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ.
ಹೇಮಾವತಿ ಜಲಾಶಯಕ್ಕೆ 74 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳಾಗಿದ್ದು, 2912 ಅಡಿಗಷ್ಟು ನೀರು ಸಂಗ್ರಹವಾಗಿ ಭರ್ತಿಯಾಗಲು ಕೇವಲ 10 ಅಡಿ ಮಾತ್ರ ಬಾಕಿ ಉಳಿದಿದೆ.
ಜಲಾಶಯದ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ 14 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಒಂದೆರಡು ದಿನದಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ.
ಜಲಾಶಯದಿಂದ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನದಿದಂಡೆಯ ಆಸುಪಾಸಿನ ಗ್ರಾಮಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ.