ನವದೆಹಲಿ, ಆ.7- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎರಡನೆ ದಿನವಾದ ಇಂದು ಕೂಡ ಮುಂದುವರಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಕುರಿತು ದಿನನಿತ್ಯದ ವಿಚಾರಣೆ ಎರಡನೆ ದಿನವಾದ ಇಂದೂ ಮುಂದುವರಿಯಿತು. ಅರ್ಜಿದಾರರಲ್ಲಿ ಒಬ್ಬರಾದ ನಿರ್ಮೋಹಿ ಅಖಾಡ ಇಂದು ಕೂಡ ತನ್ನ ವಾದ ಮತ್ತು ಸಮರ್ಥನೆಗಳನ್ನುಮಂಡಿಸಿತು.
ನಿನ್ನೆ ಸುಪ್ರೀಂನಲ್ಲಿ ನಿರ್ಮೋಹಿ ಅಖಾಡ ಪರ ಹಿರಿಯ ವಕೀಲ ಸುಶೀಲ್ ಜೈನ್ ಅವರು 1934ರಿಂದಲೂ ಅಯೋಧ್ಯೆಯ ವಿವಾದಿತ ಸ್ಥಳವನ್ನು ಪ್ರವೇಶಿಸಲು ಮುಸ್ಲಿಮರಿಗೆ ಅವಕಾಶ ನೀಡಿಲ್ಲಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಬಹುವರ್ಷಗಳಿಂದಲೂ ಈ ಸ್ಥಳದಲ್ಲಿ ನಮಗೆ ನ್ಯಾಯಸಮ್ಮತವಾಗಿ ಭೂಮಿ ದಕ್ಕಬೇಕಿದೆ. ಇದಕ್ಕಾಗಿ ಭೂಮಿ ಸ್ವಾಧೀನ ಮತ್ತು ನಿರ್ವಹಣೆ ಹಕ್ಕನ್ನು ತಮ್ಮ ಕಕ್ಷಿದಾರರು ಹೊಂದಿರುವುದಾಗಿ ಜೈನ್ ವಾದ ಮಂಡಿಸಿದರು.
ನಂತರ ಬಹು ವರ್ಷಗಳಿಂದಲೂ ರಾಮಜನ್ಮಭೂಮಿ ಮಂದಿರದಲ್ಲಿದ್ದ ಪ್ರಾಚೀನ ವಿನ್ಯಾಸಗಳು ಮತ್ತು ವಿವಿಧ ಕೊಠಡಿಗಳ ಬಗ್ಗೆ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ನ್ಯಾಯಮೂರ್ತಿಗಳಾದ ಎಸ್.ಎ.ಬೋಬಡೆ, ಡಿ.ವೈ.ಚಂದ್ರಚೂಡ್, ಅಶೊಕ್ ಭೂಷಣ್ ಮತ್ತು ಎಸ್.ಎ.ನಜೀರ್ ಪಂಚ ನ್ಯಾಯಪೀಠದಲ್ಲಿದ್ದಾರೆ.
ನಿನ್ನೆಯಿಂದ ಆರಂಭವಾಗಿರುವ ವಿಚಾರಣೆಯ ದಿನನಿತ್ಯದ ಕಲಾಪಗಳನ್ನು ನೇರ ಪ್ರಸಾರ ಮಾಡುವಂತೆ ಅಥವಾ ಕಲಾಪದ ಪ್ರಕ್ರಿಯೆಯನ್ನು ವೀಡಿಯೋ ಮೂಲಕ ದಾಖಲಿಸಿಕೊಳ್ಳುವಂತೆ ಕೋರಿ ಆರ್ಎಸ್ಎಸ್ ನಾಯಕ ಕೆ.ಎನ್.ಗೋವಿಂದಾಚಾರ್ಯ ಮೊನ್ನೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎ.ಬೋಬಡೆ ಮತ್ತು ಬಿ.ಆರ್.ಗವಾಯಿ, ಅವರನ್ನುಒಳಗೊಂಡ ಪೀಠ ಈ ಅರ್ಜಿಯಲ್ಲಿ ಮನವಿ ಮಾಡಿರುವಂತೆ ತುರ್ತು ವ್ಯವಸ್ಥೆ ಕೋರಿಕೆಯನ್ನು ತಳ್ಳಿ ಹಾಕಿತ್ತು.
ನ್ಯಾಯಾಲಯದ ವಿಚಾರಣೆಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡುವುದು ಅಥವಾ ವಿಡಿಯೋ ಚಿತ್ರೀಕರಣದ ಮೂಲಕ ದಾಖಲಿಸಿಕೊಳ್ಳುವುದು ಸುಲಭದ ಕಾರ್ಯವಲ್ಲ. ಇದಕ್ಕೆ ಸಿದ್ಧತೆಗಳು ಮತ್ತು ಸಾಧನಗಳ ವ್ಯವಸ್ಥೆ ಇದೆ.ಇದಕ್ಕೆ ಕಾಲಾವಕಾಶ ಮತ್ತು ಚರ್ಚೆ ನಡೆಸುವ ಅಗತ್ಯವಿದೆ ಎಂದು ಪೀಠ ಹೇಳಿತ್ತು.
ಸುಪ್ರೀಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್ಸಿಎ ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯರ ಮಧ್ಯಸ್ಥಿಕೆ ಸಮಿತಿಯ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಾಳೆಯಿಂದ ಈ ವಿವಾದದ ವಿಚಾರಣೆ ಕೈಗೆತ್ತಿಕೊಂಡಿದೆ.
ರಾಮಜನ್ಮಭೂಮಿ, ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಒಟ್ಟು 14 ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ 2.77 ಎಕರೆ ಭೂ ಪ್ರದೇಶವನ್ನು ಸುನ್ನಿ ವಕ್ಫ್ ಮಂಡಳಿ ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ ಈ ಮೂವರು ಪಕ್ಷದಾರರಿಗೆ ಸಮನಾಗಿ ಹಂಚಿಕೆ ಮಾಡಿತ್ತು.ಆದರೆ ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.
ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚಿಸಲಾಗಿದ್ದ ತ್ರಿಸದಸ್ಯ ಮಧ್ಯಸ್ಥಿಕೆ ಸಮಿತಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಸಂಧಾನ ಪ್ರಕ್ರಿಯೆ ಕೈಗೊಂಡು ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು.
ಆದರೆ, ವಿವಾದ ಇತ್ಯರ್ಥ ಸಂಧಾನದಲ್ಲಿ ಸಮಿತಿ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ನಿರ್ಣಯಿಸಿ ನಿನ್ನೆಯಿಂದ ವಿಚಾರಣೆ ಆರಂಭಿಸಿದೆ.