ಆಗಸ್ಟ್ 9ರಂದು ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು,ಆ.7-ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಆ.9ರಂದು ವಿಸ್ತರಣೆಯಾಗಲಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಬಿ.ಶ್ರೀರಾಮುಲು ಸೇರಿದಂತೆ 12ರಿಂದ 15 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಸಚಿವರಾಗುವವರ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ, ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ ಇದ್ದು ಶಾಸಕತ್ವ ಅನರ್ಹಗೊಂಡಿರುವವರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಪೂರಕವಾಗಿ ಇತ್ಯರ್ಥವಾದರೆ ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್ ಅವರೂ ಕೂಡ ಮಂತ್ರಿಗಳಾಗಲಿದ್ದಾರೆ.

ಒಂದು ವೇಳೆ ಶಾಸಕತ್ವದಿಂದ ಅನರ್ಹಗೊಂಡವರ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗದೆ ಇದ್ದರೆ ಬಿಜೆಪಿಯ ಶಾಸಕರು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ವಿವರಿಸಿವೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಜುಲೈ 26ರಂದು ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಜುಲೈ 29ರಂದು ಸಾಬೀತುಪಡಿಸಿದ್ದರು.

ಇದಾದ ನಂತರ ಅವರು ಅಧಿಕಾರಿಗಳೊಂದಿಗೆ ಸಚಿವ ಸಂಪುಟ ಸಭೆ ನಡೆಸುವುದು ಸೇರಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು ಸಹಜವಾಗಿಯೇ ಸಂಪುಟ ವಿಸ್ತರಣೆಯಿಲ್ಲದೆ ಹೆಜ್ಜೆ ಇಡುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಈ ಮಧ್ಯೆ ಮಂತ್ರಿಗಿರಿಗಾಗಿ ದೊಡ್ಡ ಮಟ್ಟದ ಲಾಬಿ ನಡೆಯುತ್ತಿದೆಯಾದರೂ ಬಿಜೆಪಿ ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿರುವುದರಿಂದ ಯಾರೂ ಬಹಿರಂಗವಾಗಿ ಚಟುವಟಿಕೆ ನಡೆಸುತ್ತಿಲ್ಲ.

ಆದರೂ ಹೈಕಮಾಂಡ್ ಮತ್ತು ಸಂಘಪರಿವಾರದ ನಾಯಕರ ಬಳಿ ಮಂತ್ರಿಗಿರಿಗಾಗಿ ಒಂದು ಮಟ್ಟದಲ್ಲಿ ಪ್ರಮುಖ ನಾಯಕರು ಲಾಬಿ ನಡೆಸುತ್ತಿದ್ದು ಬೆಂಗಳೂರಿನಿಂದ ಬ್ರಾಹ್ಮಣರ ಕೋಟಾದಡಿ ಸುರೇಶ್ ಕುಮಾರ್ ಇಲ್ಲವೇ ರವಿ ಸುಬ್ರಮಣ್ಯ ಅವರು ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ.

ಇದೇ ರೀತಿ ದಾವಣಗೆರೆ ಜಿಲ್ಲೆಯಿಂದ ಮಂತ್ರಿಗಳಾಗಲು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಎಸ್.ಎ.ರವೀಂದ್ರನಾಥ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕಾದವರ ಪಟ್ಟಿಯೊಂದನ್ನು ತಯಾರಿಸಿಕೊಂಡು ದೆಹಲಿಗೆ ಹೋಗಿದ್ದು, ಅದೇ ಕಾಲಕ್ಕೆ ಸಂಘಪರಿವಾರದ ನಾಯಕರ ಶಿಫಾರಸು ಪಟ್ಟಿಯೂ ಹೈಕಮಾಂಡ್ ವರಿಷ್ಠರ ಕೈ ತಲುಪಿದೆ.

ಹೀಗಾಗಿ ಯಡಿಯೂರಪ್ಪನವರ ಪಟ್ಟಿಯೊಂದಿಗೆ ಸಂಘಪರಿವಾರದ ನಾಯಕರು ರವಾನಿಸಿರುವ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮೊದಲ ಕಂತಿನ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲು ಈವರೆಗೆ ಒಪ್ಪಿಗೆ ನೀಡದ ಹೈಕಮಾಂಡ್ ಸದ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರ್ಯಾಯವಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಹೀಗಾಗಿ ಉಪಮುಖ್ಯಮಂತ್ರಿಗಳಾಗಲು ತವಕಿಸುತ್ತಿದ್ದ ಹಲವು ನಾಯಕರು ನಿರಾಸೆಗೊಳ್ಳುವಂತಾಗಿದ್ದು ಇಷ್ಟಾದರೂ ಚಕಾರ ಎತ್ತದೆ ಮೌನವಾಗಿರಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ತಂಡ ರಚನೆ:
ಈ ಮಧ್ಯೆ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಅದರ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡಲು, ಸಲಹೆ ನೀಡಲು ಬಿಜೆಪಿ ಹಾಗೂ ಸಂಘಪರಿವಾರದ ನಾಯಕರಿರುವ ಒಂದು ತಂಡ ನೇಮಕಗೊಳ್ಳಲಿದೆ ಎಂದು ತಿಳಿದುಬಂದಿದೆ.

ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರ ಒಂದು ನಿರ್ಣಯ ಕೈಗೊಳ್ಳುವ ಮುನ್ನ ಈ ತಂಡದ ಗಮನಕ್ಕೆ ತರಬೇಕೆಂದು ಈಗಾಗಲೇ ಮೌಖಿಕವಾಗಿ ಸೂಚನೆ ನೀಡಲಾಗಿದ್ದು ಈ ತಂಡ ಹೈಕಮಾಂಡ್ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ.

ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳ ಬಗ್ಗೆ ಹೈಕಮಾಂಡ್ ನಾಯಕರು ನೀಡುವ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಈ ತಂಡ ನೀಡುವ ಸಲಹೆಗಳನ್ನು ಸರ್ಕಾರ ಪರಿಗಣಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ