ಪಂಚಭೂತಗಳೊಂದಿಗೆ ಲೀನವಾದ ಧೀಮಂತ ನಾಯಕಿಯ ಪಾರ್ಥಿವ ಶರೀರ
ನವದೆಹಲಿ, ಆ.7- ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾದ ಅತ್ಯುತ್ತಮ ಸಂಸದೀಯ ಪಟು, ಬಿಜೆಪಿ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್(67) ಅವರ ಅಂತ್ಯಕ್ರಿಯೆ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇದರೊಂದಿಗೆ ಮಹಾ ಸಾಧಕಿ ಮತ್ತು ಧೀಮಂತ ನಾಯಕಿಯ ಪಾರ್ಥಿವ ಶರೀರ ಪಂಚಭೂತಗಳೊಂ
ದಿಗೆ ಲೀನವಾಯಿತು.
ರಾಜಧಾನಿ ದೆಹಲಿಯ ಲೋಧಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನಡೆದ ಸುಷ್ಮಾ ಅವರ ಅಂತ್ಯಕ್ರಿಯೆ ಗಣ್ಯಾತಿಗಣ್ಯರು, ವಿವಿಧ ಕ್ಷೇತ್ರಗಳ ಖ್ಯಾತನಾಮರು, ಅಪಾರ ಸಂಖ್ಯೆಯ ಅಭಿಮಾನಿಗಳು ದು:ಖತಪ್ತ ವಾತಾವರಣದಲ್ಲಿ ನೆರವೇರಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ.ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಗೃಹ ಸಚಿವ ಅಮಿತ್ ಷಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ರವಿಶಂಕರ್ ಪ್ರಸಾದ್, ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ರವಿಶಂಕರ್ ಪ್ರಸಾದ್ ಸೇರಿದಂತೆ ಮೋದಿ ಸಂಪುಟದ ಮಂತ್ರಿ ಮಹೋದಯರು, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಮತ್ತು ಡಾ.ಮನಮೋಹನ್ ಸಿಂಗ್, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಗುಲಾಂನಬಿ ಆಜಾದ್, ಅಧೀರ್ ರಂಜನ್ ಚೌಧರಿ, ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಬಿ.ಎಸ್.ಯಡಿಯೂರಪ್ಪ, ಅರವಿಂದ ಕೇಜ್ರಿವಾಲ್, ಯೋಗಿ ಆದಿತ್ಯನಾಥ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ಧುರೀಣ ಓಮನ್ ಚಾಂಡಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಯೋಗ ಗುರು ರಾಮದೇವ್ ಮೊದಲಾದವರು ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹೃದಯಾಘಾತದಿಂದ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರವನ್ನು ನಂತರ ದೆಹಲಿಯಲ್ಲಿರುವ ಅವರ ನಿವಾಸಕ್ಕೆ ನಸುಕಿನಲ್ಲಿ ತರಲಾಯಿತು.
ಇಂದು ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಜಂತರ್-ಮಂತರ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸುಷ್ಮಾ ಅವರ ಪತಿ ಮತ್ತು ಹಿರಿಯ ವಕೀಲ ಸ್ವರಾಜ್ ಕೌಶಲ್ ಮತ್ತು ಕುಟುಂಬದ ಸದಸ್ಯರಿಗೆ ಪ್ರಧಾನಿ ಸಾಂತ್ವನ ಹೇಳಿದರು.ಅನೇಕ ಗಣ್ಯಾತಿಗಣ್ಯರೂ ಕೂಡ ಕೇಂದ್ರದ ಮಾಜಿ ವಿದೇಶಾಂಗ ಸಚಿವೆಯ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ತರುವಾಯ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯಅಂಗೀಕರಿಸಿ ಮೌನ ಆಚರಿಸಲಾಯಿತು.
ಬಳಿಕ ಸುಷ್ಮಾ ಸ್ವರಾಜ್ ಅವರ ಕಳೇಬರವನ್ನು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಅಲಂಕೃತ ವಾಹನದಲ್ಲಿರಿಸಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.ನಂತರ ಪಕ್ಷದ ಕಾರ್ಯಕರ್ತರು ಮತ್ತು ಜನರ ಅಂತಿಮ ದರ್ಶನಕ್ಕಾಗಿ ಅಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಇರಿಸಲಾಯಿತು.ಅಪಾರ ಜನ ಸಾಗರದೊಂದಿಗೆ ಅಂತಿಮ ಯಾತ್ರೆ ಮೂಲಕ ಲೋಧಿ ರಸ್ತೆಯ ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.
ಅಲ್ಲಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ಮತ್ತು 21 ಗನ್ ಸೆಲ್ಯೂಟ್ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಧೀಮಂತ ನಾಯಕಿ ಅಂತ್ಯ ಕ್ರಿಯೆ ನೆರವೇರಿತು.ಪಕ್ಷ ಅಸಂಖ್ಯಾತ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಅಭಿಮಾನಿಗಳು ಸರದಿ ಸಾಲಿನಲ್ಲಿ ಅಗಲಿದ ಮಹಾಚೇತನದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಮರ್ಪಿಸಿದರು.ಮಾ ತುಜೆ ಸಲಾಂ ಎಂಬ ಘೋಷಣೆಗಳ ಮಾರ್ದನಿಯೊಂದಿಗೆ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.
ಅಂತ್ರಯಕ್ರಿಯೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪ್ರಕಾಶ್ ಜಾವ್ಡೇಕರ್,ಕಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾನಿ, ಕಾಂಗ್ರೇಸ್ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಇತರ ಮುಖಂಡರು ಉಪಸ್ಥಿತರಿದ್ದರು.
ಅಲ್ಲದೇ, ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಪಸ್ಥಿತರಿದ್ದರು.
ರಾಜ್ಯಸಭೆ ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆ
ನವದೆಹಲಿ, ಆ.7- ರಾಜ್ಯಸಭೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.ಜೂ.20ರಂದು ಆರಂಭವಾದ ಅಧಿವೇಶನ ಜು.26ರಂದು ಪೂರ್ಣಗೊಳ್ಳಬೇಕಿತ್ತು.ಆದರೆ, ಕೆಲವು ಮಹತ್ವದ ಮಸೂದೆಗಳು ಮತ್ತು ಶಾಸನಗಳು ಅಂಗೀಕಾರದ ಹಿನ್ನೆಲೆಯಲ್ಲಿ ಆ.7ರ ವರೆಗೂ ವಿಸ್ತರಿಸಲಾಗಿತ್ತು.
ಇಂದು ಬೆಳಗ್ಗೆ ಸಂಸತ್ತಿನ ಮೇಲ್ಮನೆ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆ ಉಪರಾಷ್ಟ್ರಪತಿಯೂ ಆದ ಸಭಾಪತಿ ಡಾ.ವೆಂಕಯ್ಯನಾಯ್ಡು ನಿನ್ನೆ ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಗೌರವಾರ್ಥ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.
ಸುಷ್ಮಾ ಸ್ವರಾಜ್ ಅವರ ಗುಣಗಾನ ಮಾಡಿದ ಸಭಾಪತಿ, ಅವರು ನನಗೆ ಸೋದರಿ ಸಮಾನ. ಪ್ರತಿಬಾರಿ ರಾಖಿ ಹಬ್ಬದ ಸಂದರ್ಭದಲ್ಲಿ ನನಗೆ ರಕ್ಷಾಬಂಧನ್ ಕಟ್ಟಿ ಶುಭ ಹಾರೈಸುತ್ತಿದ್ದರು ಎಂದು ಸ್ಮರಿಸಿದರು.ಸುಷ್ಮಾ ಸ್ವರಾಜ್ ಗೌರವಾರ್ಥ ಸದನದಲ್ಲಿ ಮೌನ ಆಚರಿಸಲಾಯಿತು.