ಬೆಂಗಳೂರು, ಆ. 5- ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಾವು ಸ್ಪರ್ಧಾಕಾಂಕ್ಷಿಯಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಜೆಪಿ ಭವನದಲ್ಲಿಂದು ಯುವ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬೇಕೆಂಬ ಒತ್ತಾಯ ಏಕೆ ಕೇಳಿ ಬರುತ್ತಿದೆ ಎಂದು ಗೊತ್ತಿಲ್ಲ. ಕಾರ್ಯಕರ್ತರ ಸಭೆ ಕರೆದು ಆಕಾಂಕ್ಷಿಗಳ ಪಟ್ಟಿ ತಯಾರಿಸಿ ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುವುದು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂದವರೇ ಸ್ಪರ್ಧಿಸಬೇಕೆಂಬ ಒತ್ತಾಯ ಸರಿಯಲ್ಲ ಎಂದರು.
ಸಾಕಷ್ಟು ಕಾರ್ಯಕರ್ತರು, ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ.ಅವರು ಸ್ಪರ್ಧಿಸಬೇಕು. ಕೆ.ಆರ್.ಪೇಟೆ ಜೆಡಿಎಸ್‍ನ ಭದ್ರಕೋಟೆಯಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಕಣಕ್ಕಿಳಸಬೇಕೆಂಬುದು ತಮ್ಮ ಅಭಿಪ್ರಾಯ ಎಂದು ಹೇಳಿದರು.
ಕೆ.ಆರ್.ಪೇಟೆ ಅಲ್ಲದೆ ಹುಣಸೂರು, ಮಹಾಲಕ್ಷ್ಮೀಲೇಔಟ್, ಆರ್‍ಆರ್‍ನಗರ ಕ್ಷೇತ್ರಗಳ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಟರಿಗೆ ಸಲ್ಲಿಸಲಾಗುವುದು, ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದ ಅವರು, 17 ಮಂದಿ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಪಕ್ಷ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಜೆಡಿಎಸ್ ಪಕ್ಷಕ್ಕೆ ಯುವಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುವುದರ ಜತೆ ಪಕ್ಷ ಸಂಘಟನೆಯನ್ನು ಬಲಗೊಳಿಸಲಾಗುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ವಯಸ್ಸಿನಲ್ಲೂ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ.ಅವರು ನಮಗೆ ಆದರ್ಶಪ್ರಾಯರು.ಆ. 7ರಂದು ಅರಮನೆ ಮೈದಾನದಲ್ಲಿ ಪಕ್ಷದ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರ ಸಭೆಯನ್ನು ಅವರ ನೇತೃತ್ವದಲ್ಲೇ ನಡೆಸಲಾಗುವುದು ಎಂದು ವಿವರಿಸಿದರು.
ಸರ್ಕಾರ ಇಲ್ಲದ ಸಂದರ್ಭದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತರುವುದು ಅವಶ್ಯಕ.ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು.ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ 14ತಿಂಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ.ಮಾಜಿ ಸಚಿವ ಜಿ.ಟಿ.ದೇವೇಗೌಡರು ರಾಜಕೀಯ ನಿವೃತ್ತಿ ಬಗ್ಗೆ ಹೇಳಿದ್ದಾರೆ.ಅವರ ಪುತ್ರ ಹರೀಶ್ ನನಗೆ ಸಹೋದರಿದ್ದಂತೆ ಮೈಸೂರಿಗೆ ಅವರಿಬ್ಬರ ಕೊಡುಗೆ ಸಾಕಷ್ಟಿದೆ.ಅವರೊಂದಿ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.
ನಾನು ಪಾದಯಾತ್ರೆ ಮಾಡುತ್ತೇನೆಂಬುದು ಊಹಾಪೆÇೀಹ.ಯಾವ ವಿಚಾರಕ್ಕಾಗಿ ಪಾದಯಾತ್ರೆ ಮಾಡಬೇಕೆಂಬುದು ಮುಖ್ಯ.ಸುಮ್ಮನೆ ಪಾದಯಾತ್ರೆ ಮಾಡಲಾಗುವುದಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾವಾರು ಪಕ್ಷ ಸಂಘಟನೆ, ಬಲಗೊಳಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು.ಚಂದ್ರಶೇಖರ್, ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.