ಕಾಶ್ಮೀರದಲ್ಲಿ ತಡರಾತ್ರಿ ದಿಢೀರ್​ ಬೆಳವಣಿಗೆ; ಒಮರ್​ ಅಬ್ದುಲ್ಲಾ, ಮೆಹಬೂಬಾ ಮುಫ್ತಿಗೆ ಗೃಹ ಬಂಧನ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಗಂಟೆಗೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕಣಿವೆ ರಾಜ್ಯಕ್ಕೆ ಈಗಾಗಲೇ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಮಧ್ಯೆ ಭಾನುವಾರ ತಡರಾತ್ರಿ ಒಮರ್​ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿಯನ್ನು ವಶಕ್ಕೆ ಪಡೆದು ಗೃಹ ಬಂಧನದಲ್ಲಿ ಇಡಲಾಗಿದೆ.

ಮೆಹಬೂಬಾ ಮುಫ್ತಿ ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ವೇಳೆ ಅವರು ಜಮ್ಮು-ಕಾಶ್ಮೀರದ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. “ಇಲ್ಲಿನ ಖಾಸಗಿ ಹೋಟೆಲ್​ವೊಂದರಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಆದರೆ, ಯಾವುದೇ ಸಭೆಗಳನ್ನು ಆಯೋಜಿಸುವಂತಿಲ್ಲ ಎಂದು ಪೊಲೀಸರು ನಮ್ಮ ಹೋಟೆಲ್ ಬುಕ್ಕಿಂಗ್ ರದ್ದು ಮಾಡಿಸಿದ್ದರು. ಹೀಗಾಗಿ ನನ್ನ ಮನೆಯಲ್ಲೇ ಸಭೆ ಆಯೋಜಿಸಿದ್ದೇ” ಎಂದು ಮುಫ್ತಿ ಪ್ರತಿಕ್ರಿಯಿಸಿದ್ದರು.

ಸಭೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ ಸೇರಿದಂತೆ  ಸರ್ವ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ ಎನ್ನಲಾಗಿದೆ.

ಈಗಾಗಲೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಹಿಂಪಡೆಯಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಗಸ್ಟ್​ 15ರವರೆಗೆ ಇಂಟರ್​​ನೆಟ್​ ಸೇವೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

ಹೆಚ್ಚುವರಿ ಸೇನಾ ತುಕಡಿಗಳ ನಿಯೋಜನೆ ಹಾಗೂ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮಹತ್ತರ ಬೆಳವಣಿಗೆಯಾಗುವ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಉಗ್ರ ದಾಳಿಯ ನಿರೀಕ್ಷೆಯಲ್ಲಿ ಕಾಶ್ಮೀರದಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಬೇರಿನ್ನಾವುದೋ ಘಟನೆ ಜರುಗುವ ಸಾಧ್ಯತೆ ಇಲ್ಲದಿಲ್ಲ. ರಾಜಕೀಯ ತಜ್ಞರು ಪ್ರಮುಖವಾಗಿ ಎರಡು ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ. ಒಂದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಮತ್ತು 35ಎ ಅನ್ನು ಸಂವಿಧಾನದಿಂದ ತೆಗೆದುಹಾಕಬಹುದು. ಎರಡು, ಜಮ್ಮು-ಕಾಶ್ಮೀರವನ್ನು ಮೂರು ಹೋಳಾಗಿ ವಿಭಜಿಸಬಹುದು.

ಇವೆರೆಡರಲ್ಲಿ ಯಾವುದಾದರೂ ಕೂಡ ಕಾಶ್ಮೀರದಲ್ಲಿ ಜನರು ದಂಗೆ ಏಳುವ ಅಪಾಯವಿರುವುದರಿಂದ ಭದ್ರತೆ ಬಿಗಿಗೊಳಿಸಲಾಗಿರಬಹುದೆಂಬ ಅಭಿಪ್ರಾಯವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ