ಇಂಗ್ಲೆಂಡ್‍ನಲ್ಲಿ ಗೋಚರಿಸಿದ ಬೃಹತ್ ಗಾತ್ರದ ಜೆಲ್ಲಿ ಫಿಶ್

ಲಂಡನ್,ಆ.4- ಅಗಾಧ ಜಲರಾಶಿಯ ಸಮುದ್ರ ಒಡಲು ವಿಸ್ಮಯಗಳ ಕಡಲು. ಸಾಗರಗಳಲ್ಲಿ ಅನೇಕಾನೇಕ ಅಪರೂಪದ ಮತ್ಸ್ಯ ಸಂಕುಲಗಳಿವೆ. ಇದಕ್ಕೆ ಪುರಾವೆ ಎಂಬಂತೆ ಇಂಗ್ಲೆಂಡ್‍ನಲ್ಲಿ ಬೃಹತ್ ಗಾತ್ರದ ಜೆಲ್ಲಿ ಫಿಶ್ ಗೋಚರಿಸಿದೆ.

ವಾಯುವ್ಯ ಇಂಗ್ಲೆಂಡ್‍ನ ಕಾರ್ನ್‍ವಾಲ್‍ನ ಪಾಲ್ ಮೌತ್ ಕರಾವಳಿ ಪ್ರದೇಶದಲ್ಲಿ ಅಪರೂಪದ ಜೀವ ಸಂಕುಲವೊಂದು ಪತ್ತೆಯಾಗಿ ಚಕಿತಗೊಳಿಸಿದೆ. ಬೃಹತ್ ಗಾತ್ರದ ಜೆಲ್ಲಿ ಫಿಶ್ ಕಂಡುಬಂದಿರುವುದು ಸಾಗರ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಸಾಗರ ಸಂಶೋಧಕಿ ಲಿಜೀ ಡ್ಯಾಲಿ ಇಂಗ್ಲೆಂಡ್‍ನ ವಿವಿಧೆಡೆ ಸಮುದ್ರ ಜೀವಿಗಳ ಸಪ್ತಾಹದ ಅಂಗವಾಗಿ ಅಧ್ಯಯನ ನಡೆಸುತ್ತಿದ್ದರು. ಅವರ ಸ್ನೇಹಿತ ಡಾನ್ ಅಬೋಟ್ ಸಹ ಈ ಸಂಶೋಧನೆಗೆ ಸಾಥ್ ನೀಡಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಅಚಾನಕ್ಕಾಗಿ ದೊಡ್ಡ ಜೆಲ್ಲಿ ಫಿಶ್ ಎದುರಾಯಿತು. ಇದನ್ನು ತೆಳು ಬಲೆ ಮೀನು ಎಂದು ಸಹ ಕರೆಯುವರು. ಮನುಷ್ಯನಿಗಿಂತಲೂ ದೊಡ್ಡದಾಗಿದ್ದ ಇದು ಸುಮಾರು 1.5 ಮೀಟರ್‍ಗಳಷ್ಟು ಉದ್ದವಿದೆ. ಇಷ್ಟು ದೊಡ್ಡ ಜೆಲ್ಲಿ ಮೀನು ಈವರೆಗೆ ಸಾಗರದಲ್ಲೆಲ್ಲೂ ಕಂಡುಬಂದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ