ಮುಂಬೈ/ನಾಸಿಕ್, ಆ.4- ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಪಾಲ್ಭರ್. ನಾಸಿಕ್ ಸೇರಿದಂತೆ ವಿವಿಧೆಡೆ ಮುಂದುವರಿದ ಮಹಾಮಳೆಯ ಆರ್ಭಟಕ್ಕೆ ಜನಜೀವನ ಆಯೋಮಯವಾಗಿದೆ. ವಾಹನಗಳು ಮತ್ತು ರೈಲು ಸಂಚಾರ ಸ್ಥಗಿತಗೊಂಡಿದ್ದು ಸಂಚಾರ ವ್ಯವಸ್ಥೆ ಏರುಪೇರಾಗಿದೆ.
ರಕ್ಷಸ ಮಳೆಯಿಂದಾಗಿ ಈ ಜಿಲ್ಲೆಗಳಲ್ಲಿ ಜಲದಿಗ್ಬಂಧನಕ್ಕೆ ಒಳಗಾಗಿದ್ದು, ಸಾವು-ನೋವು ಸಂಭವಿಸಿವೆ.
ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಇಂದು ಕೂಡ ವರುಣ ಆರ್ಭಟಿಸಿದ್ಧಾನೆ.
ಪಾಲ್ಘರ್ ಜಿಲ್ಲೆಯ ಭಾರೀ ಪ್ರವಾಹದಿಂದ 16 ವರ್ಷ ಬಾಲಕನೊಬ್ಬ ಕೊಚ್ಚಿಕೊಂಡು ಹೋಗಿ ಜಲ ಸಮಾಧಿಯಾಗಿದ್ದಾನೆ. ಅನೇಕ ಜಾನುವಾರುಗಳು ನೀರುಪಾಲಾಗಿವೆ. ನದಿ ನೀರಿಯ ಪ್ರವಾಹದೊಂದಿಗೆ ಮೊಸಳೆಗಳು ಕಾಣಿಸಿಕೊಂಡು ಜನರು ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ. ಕೆಲವು ಮೊಸಳೆಗಳು ಮತ್ತು ಸರ್ಪಗಳನ್ನು ಅರಣ್ಯ ಸಿಬ್ಬಂದಿ ನೆರವಿನೊಂದಿಗೆ ಸೆರೆಹಿಡಿಯಲಾಗಿದೆ.
ನಾಸಿಕ್‍ನಲ್ಲೂ ಜಲಾಘಾತದಿಂದ ಜನರು ಹೈರಾಣಾಗಿದ್ದಾರೆ. ಗಂಗಾಪುರ್ ಜಲಾಶಯದಿಂದ ಅತ್ಯಧಿಕ ಪ್ರಮಾಣದ ನೀರುನ್ನು ಗೋದಾವರಿ ನದಿಗೆ ಹರಿಯಲು ಬಿಟ್ಟಿರುವುದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಉಪ ನದಿಗಳೂ ಸಹ ಅಪಾಯದ ಮಟ್ಟ ಮೀರಿ ಹರಿಸುತ್ತಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ನಾಸಿಕ್ ಪ್ರಸಿದ್ಧ ಮಠ-ಮಂದಿರಗಳು ಜಲಾವೃತವಾಗಿದ್ದು, ದೇವಾಲಯಗಳು ಮುಳುಗಡೆ ಭೀತಿ ಆತಂಕದಲ್ಲಿದೆ.
ತುರ್ತು ರಕ್ಷಣಾ ಕಾರ್ಯಕರ್ತರು ಸಮಯೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅಪಾಯಕಾರಿ ಮಟ್ಟದಲ್ಲಿ ಗೋದಾವರಿ:
ಅಮರಾವತಿ ವರದಿ: ಆಂಧ್ರ ಪ್ರದೇಶದ ಡೌಲೇಶ್ವರಂನಲ್ಲಿರುವ ಸರ್ ಅರ್ಥರ್ ಕಾಟನ್ ಬ್ಯಾರೇಜ್ ಜಲಾಶಯದಲ್ಲಿ ಇಂದು ಬೆಳಗ್ಗೆ ಗೋದಾವರಿ ನೀರಿನ ಮಟ್ಟ 11 ಲಕ್ಷ ಕ್ಯೂಸೆಕ್ ತಲುಪಿದ್ದು, ಸರ್ಕಾರ ಎರಡನೆ ಬಾರಿ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.
ಗೋದಾವರಿ ನದಿ ಉಕ್ಕಿ ಹರಿಯುತ್ತಿದ್ದು, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.