ಬಿಬಿಎಂಪಿ ಬಜೆಟ್ ಅನುದಾನಕ್ಕೆ ತಡೆ-ಸಿಎಂ ನಿರ್ಧಾರಕ್ಕೆ ಕಾಂಗ್ರೇಸ್ ಆಕ್ರೋಶ

ಬೆಂಗಳೂರು, ಆ.5- ಬಿಬಿಎಂಪಿ ಬಜೆಟ್ ಮತ್ತು ನವ ಬೆಂಗಳೂರು ಯೋಜನೆಯ ಅನುದಾನಕ್ಕೆ ತಡೆನೀಡಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ದ್ವೇಷದ ರಾಜಕಾರಣ ಮಾಡದಂತೆ ಮನವಿ ಮಾಡಲು ಮುಂದಾಗಿದೆ.
ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷದ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹಮ್ಮದ್‍ಖಾನ್, ಶಾಸಕರಾದ ಸೌಮ್ಯಾರೆಡ್ಡಿ, ಬೈರತಿ ಸುರೇಶ್, ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮಾಜಿ ಸದಸ್ಯ ರವಿ ಮತ್ತಿತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ದಿನೇಶ್‍ಗುಂಡೂರಾವ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನವ ಬೆಂಗಳೂರು ಯೋಜನೆಯನ್ನು ರೂಪಿಸಿ ಎಂಟು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.ಅದರಡಿ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ವೈಟ್‍ಟಾಪಿಂಗ್, ತ್ಯಾಜ್ಯ ಸಂಸ್ಕರಣಾ ಘಟಕಗಳು, ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಜತೆಗೆ ಬಿಬಿಎಂಪಿ ರೂಪಿಸಿದ್ದ 11,500 ಕೋಟಿ ರೂ.ಗಳ ಬಜೆಟ್‍ಗೂ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಈ ಎಲ್ಲ ಕಾಮಗಾರಿಗಳ ಟೆಂಡರ್ ಮುಗಿದು ಕೆಲಸ ಆರಂಭವಾಗಿದೆ.ಈಗ ಏಕಾಏಕಿ ಯಡಿಯೂರಪ್ಪನವರು ತಡೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನವ ಬೆಂಗಳೂರು ಯೋಜನೆಯಡಿ ಯಾವುದೇ ಒಂದು ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ. ಎಲ್ಲರಿಗೂ ಪಕ್ಷ ಭೇದ ಮರೆತು ಸರಿಸಮಾನವಾಗಿ ಹಣ ಹಂಚಲಾಗಿದೆ.ಈಗ ಅದನ್ನು ವಾಪಸ್ ಪಡೆದಿರುವುದು ಸರಿಯಲ್ಲ. ಅದೇ ರೀತಿ ಹಲವು ಸುತ್ತಿನ ಕಸರತ್ತಿನ ಮೂಲಕ ಬಿಬಿಎಂಪಿ ಬಜೆಟ್ ಅಂಗೀಕಾರಗೊಂಡಿದೆ. ಅದಕ್ಕೆ ತಡೆ ನೀಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನವ ಬೆಂಗಳೂರು ಯೋಜನೆಯಡಿ ಪ್ರತಿ ಕ್ಷೇತ್ರಕ್ಕೂ ಕನಿಷ್ಠ 150 ಕೋಟಿ ಅನುದಾನವಾಗಿದೆ.ಇದರಲ್ಲಿ ಪಕ್ಷಪಾತ ಮಾಡಲಾಗಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಗಳು ಮತ್ತು ಅನುದಾನ ನಿಲ್ಲಬಾರದು.ಹೀಗಾಗಿ ಇನ್ನಷ್ಟು ಹೆಚ್ಚಿನ ಅನುದಾನ ಕೊಡುವಂತಾಗಬೇಕೆಂದು ಒತ್ತಾಯಿಸಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಮಳೆ ನೀರು ಕಾಲುವೆ, ತ್ಯಾಜ್ಯ ಸಂಸ್ಕರಣಾ ಘಟಕಗಳು ಸೇರಿದಂತೆ ಹಲವಾರು ಜನಪರ ಕಾರ್ಯಗಳು ಹಿಂದಿನ ಸರ್ಕಾರಗಳಲ್ಲಿ ಆಗಿವೆ. ನಾವು ಯಾವುದೇ ದ್ವೇಷದ ರಾಜಕಾರಣ ಮಾಡಿರಲಿಲ್ಲ. ಆದರೆ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ವೇಳೆ ತಾವು ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಹೇಳಿದ್ದಲ್ಲದೆ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು.ಅದರಂತೆ ನಡೆದುಕೊಳ್ಳಬೇಕು ಎಂದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ನವ ಬೆಂಗಳೂರು ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳು ಆರು ತಿಂಗಳ ಹಿಂದೆಯೇ ಪ್ರಗತಿಯಲ್ಲಿವೆ. ನಗರದ ಹೊರ ವಲಯದ ಪ್ರದೇಶದಲ್ಲಿ ಒಳಚರಂಡಿ ಮತ್ತು ಕಾವೇರಿ ನೀರಿನ ಪೂರೈಕೆಗಾಗಿ ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆಯಲಾಗಿದೆ.ಈಗ ಕಾಮಗಾರಿಗಳನ್ನು ಸ್ಥಗತಿಗೊಳಿಸಿ ಹೊಸದಾಗಿ ಟೆಂಡರ್ ಮಾಡಲು ಹೋದರೆ ಎಂಟು ತಿಂಗಳ ಕಾಲಾವಕಾಶ ಬೇಕು.ಒಟ್ಟು ಒಂದು ವರ್ಷ ಕಾಲ ಅಗೆದು ಬಿಟ್ಟಿರುವ ರಸ್ತೆಗಳು ಜನರಿಗೆ ತೊಂದರೆಕೊಡುತ್ತವೆ. ಅಭಿವೃದ್ಧಿ ಕುಂಠಿತವಾಗುತ್ತದೆ.ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ