ಬೆಳಗಾವಿ,ಆ.5- ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಕೋಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ಹರಿಸಲಾಗುತ್ತಿರುವ ನೀರು ಉತ್ತರ ಕರ್ನಾಟಕದ ಹಲವೆಡೆ ಜಲಪ್ರಳಯ ಸೃಷ್ಟಿಸಿದೆ.
ಅಲ್ಲದೇ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ, ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ಹರಿಯುತ್ತಿರುವ ನೀರಿನಿಂದಾಗಿ ಕೃಷ್ಣಾ, ಮಲಪ್ರಭಾ, ವೇದಗಂಗಾ, ದೂದ್ ಗಂಗಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಕೃಷ್ಣಾ ನದಿ ನೀರು ಸೆಳೆತಕ್ಕೆ ಸಿಲುಕಿ ಓರ್ವ ಸಾವನ್ನಪ್ಪಿರುವ ಘಟನೆ ಹುಲಗಬಾಳಿ ಗ್ರಾಮದಲ್ಲಿ ನಡೆದಿದೆ.ತೋಟದ ಮನೆಯಲ್ಲಿದ್ದ ಎಮ್ಮೆಯನ್ನು ಕರೆತರಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಮಾರುತಿ ಜಾಧವ್(34) ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ 7 ರಾಯಭಾಗ ತಾಲೂಕಿನ 5 ಮತ್ತು ಅಥಣಿ ತಾಲೂಕಿನ 24 ಗ್ರಾಮಗಳು ಸೇರಿದಂತೆ ನಲವತ್ತಕ್ಕೂ ಹೆಚ್ಚು ನದಿ ತೀರದ ಗ್ರಾಮಗಳಲ್ಲಿ ಸದ್ಯ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ತಾಲೂಕಿನಾದ್ಯಂತ 3 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಆದೇಶ ಹೊರಡಿಸಿದ್ದಾರೆ.
ಯಾದಗಿರಿ, ದೇವದುರ್ಗ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಬಾಗಲಕೋಟೆ, ಚಿಕ್ಕಪಡಸಲಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಹಲಗೂರು, ಮುತ್ತೂರು ಮುಂತಾದೆಡೆ ನಡುಗಡ್ಡೆಯಲ್ಲಿ ಸಿಲುಕಿದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಯಾದಗಿರಿಯ ಬಸವಸಾಗರ ತುಂಬಿ ಹರಿಯುತ್ತಿದ್ದು, ಕೊಳ್ಳೂರು ಗ್ರಾಮ ಸೇತುವೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಸೇತುವೆ ಮುಳುಗಡೆಯಾಗಿದೆ. ಶರಣ ಗಂಗಾಂಬಿಕಾ ಐಕ್ಯಮಂಟಪ ಜಲಾವೃತಗೊಂಡಿದೆ.ಖಾನಾಪುರ ತಾಲೂಕಿನ ಹಬ್ಬನಟ್ಟಿಯ ಮಾರುತಿ ಮಂದಿರದ ಕಲಶದವರೆಗೂ ಪ್ರವಾಹ ಬಂದಿದೆ.ಖಾನಾಪುರ ತಾಲೂಕಿನ ಪಾರಿಶ್ವಾಡದಲ್ಲಿ ಮನೆ ಮತ್ತು ಮೇವಿನ ಬಣವೆಯೊಂದು ಮುಳುಗಡೆಯಾಗಿದೆ.
ಮುಂಬೈನಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೊಯ್ನಾ ನದಿಯಿಂದ ನೀರನ್ನು ಮತ್ತಷ್ಟು ಹೊರಬಿಡುವ ಸಾಧ್ಯತೆಯಿದ್ದು, ಉತ್ತರ ಕರ್ನಾಟಕದ ಜನತೆ ಸಂಕಷ್ಟಕ್ಕೀಡಾಗಲಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ.
ನದಿ ಪಾತ್ರದ ಜನರನ್ನು ಸ್ಥಳಾಂತರ ಮಾಡಿರುವುದು, ಗಂಜಿ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆಗೆ ಎನ್‍ಡಿಆರ್‍ಎಫ್ ಪಡೆ ನಿಯೋಜನೆ ಮಾಡಲಾಗಿದ್ದು, ಈಗಾಗಲೇ ಕಾರ್ಯೋನ್ಮುಖವಾಗಿದೆ.
ಕಲ್ಲೋಳ ಗ್ರಾಮದಲ್ಲಿರುವ ಬಸ್ ನಿಲ್ದಾಣ ಮುಳುಗಿ ಹೋಗಿದೆ.ದೋಣಿ ತೋಟದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 4 ತಿಂಗಳ ಮಗು ಮತ್ತು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಚಿಕ್ಕೋಡಿ ತಾಲೂಕಿನ ಯಡುರವಾಡಿ, ಅಥಣಿ ತಾಲೂಕಿನ ಹುಲಗಬಾಳಿ, ಸಪ್ತಸಾಗರ ಸೇರಿದಂತೆ ಹಲವೆಡೆ ಸೇನೆಯ ರಕ್ಷಣಾ ಕಾರ್ಯಾಚರಣೆ ಬೆಳಗಿನಿಂದ ಚಿಕ್ಕೋಡಿಯಲ್ಲಿ ಬೀಡು ಬಿಟ್ಟಿರುವ ಸೇನಾ ಪಡೆ ಪ್ರವಾಹ ಸ್ಥಳಕ್ಕೆ ಆಗಮಿಸಿದ ಕೂಡಲೆ ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನಾ ಪಡೆ ಧುಮುಕಿ ಕಾರ್ಯಾಚರಣೆ ಮುಂದುವರಿಸಿದೆ.
ಇನ್ನು ನದಿ ತೀರದ ಹೈಟೆನ್ಷನ್ ವಿದ್ಯುತ್ ಕಂಬ ವೈಯರಗಳನ್ನು ಈಗಾಗಲೇ ಹೆಸ್ಕಾಂ ಕಡಿತಗೊಳಿಸಿದೆ. ಇನ್ನು ಬೆಳಗಾವಿ- ಮೀರಜ್ ರಾಜ್ಯ ಹೆದ್ದಾರಿಯೂ ಸಹ ಹೆಚ್ಚಿನ ನೀರು ಬಂದರೆ ಮುಳುಗುವುದರ ಜತೆಗೆ ಚಿಕ್ಕೋಡಿ ತಾಲೂಕಿನ 39 ಗ್ರಾಮಗಳು ಮುಳುಗುವ ಸ್ಥಿತಿ ಬಂದೊದಗಿದೆ. ಇದರಿಂದ ಗ್ರಾಮದ ಜನರಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ.