ಬೆಂಗಳೂರು, ಆ.4- ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುತ್ತಿರುವ ಸಾವಿರಾರು ಟನ್ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮುಂದಿನ ದಿನಗಳಲ್ಲಿ ಪ್ರತಿ ಮನೆಯ ಹಂತದಲ್ಲೇ ಸಮರ್ಪಕವಾಗಿ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿಗೆ ಪೂರಕವಾಗಿ ಹೊಸ ತ್ಯಾಜ್ಯ ನಿರ್ವಹಣೆ ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಹಸಿ-ಒಣ ಕಸ, ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹ ವಾಹನಗಳಿಗೆ ನೀಡದೆ ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಎಸೆಯುವವರಿಗೆ ವಿವಿಧ ಹಂತಗಳಲ್ಲಿ ಬೇರೆ ಬೇರೆ ರೀತಿಯ ನಿಯಮ ಉಲ್ಲಂಘನೆಗೆ ಒಂದು ಸಾವಿರ ರೂ.ನಿಂದ 25 ಸಾವಿರ ರೂ.ವರೆಗೆ ದುಬಾರಿ ದಂಡ ವಿಧಿಸಬಹುದಾದ ಹಾಗೂ ಪ್ರತಿ ವರ್ಷ ನಗರದ ಎಲ್ಲ ರೀತಿಯ ಆಸ್ತಿದಾರರಿಗೆ ಪ್ರತಿ ವರ್ಷ ಶೇ.5ರಷ್ಟು ಆಸ್ತಿ ತೆರಿಗೆ ಹೆಚ್ಚಿಸಬಹುದಾದ ಅಂಶಗಳನ್ನು ಒಳಗೊಂಡ ಹೊಸ ತ್ಯಾಜ್ಯ ನಿರ್ವಹಣೆ ಕರಡು ನೀತಿಯನ್ನು ಬಿಬಿಎಂಪಿ ಸಿದ್ಧಪಡಿಸಿದೆ.
ಈ ಕರಡು ನೀತಿಗೆ ಜುಲೈ ಅಂತ್ಯದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಿದ್ದು, ಆ.7ರ ನಂತರ ಸಾರ್ವಜನಿಕ ಆಕ್ಷೇಪಣೆ, ಅಭಿಪ್ರಾಯಗಳಿಗಾಗಿ ಪಾಲಿಕೆ ಪ್ರಕಟಿಸುವ ಸಾಧ್ಯತೆ ಸಾಧ್ಯತೆ ಇದೆ.
ಉಪಕರರ ಕರೆ: ಈ ನೀತಿ ಜಾರಿಗೆ ಬಂದರೆ ಪ್ರತಿವರ್ಷ ಆಸ್ತಿ ತೆರಿಗೆದಾರರು ತೆರಿಗೆಯ ಶೇ.5ರಷ್ಟನ್ನು ಹೆಚ್ಚುವರಿಯಾಗಿ ಘನತ್ಯಾಜ್ಯ ನಿರ್ವಹಣಾ ಉಪಕರ ಎಂದು ಪಾವತಿಸಬೇಕಾಗುತ್ತದೆ. ಇದನ್ನು ಆಸ್ತಿ ತೆರಿಗೆ ಜತೆಯೇ ಸೇರಿಸಿ ವಸೂಲಿ ಮಾಡಲಾಗುತ್ತದೆ.
ಪಾಲಿಕೆ ಕೌನ್ಸಿಲ್ ಅನುಮೋದನೆ ಇಲ್ಲದೆಯೇ ಪ್ರತಿ ವರ್ಷ ಶೇ.5ರಷ್ಟು ಉಪಕರ ಹೆಚ್ಚಿಸುತ್ತ ಹೋಗಬಹುದು. ಕೌನ್ಸಿಲ್ ಒಪ್ಪಿದರೆ ಶೇ.5ಕ್ಕಿಂತ ಹೆಚ್ಚುವರಿ ಉಪಕರ ವಸೂಲಿ ಮಾಡಬಹುದು. ರಾಜ್ಯದಲ್ಲಿ ಕೇಂದ್ರ ಸರ್ಕಾರ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ-2017 ಜಾರಿ ಮಾಡುತ್ತಿರುವ ಮೊದಲ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಬಿಎಂಪಿ ಪಾತ್ರವಾಗುತ್ತಿದೆ.
ಯಾವ ಕಟ್ಟಡಕ್ಕೆ ಎಷ್ಟು ಉಪಕರ: ಈ ಕರಡು ನೀತಿಯಲ್ಲಿ ಪ್ರಮುಖವಾಗಿ 1000 ಚದರಡಿವರೆಗಿನ ವಿಸ್ತೀರ್ಣದ ನಿವಾಸಿ ಕಟ್ಟಡಕ್ಕೆ ಪ್ರತಿ ತಿಂಗಳು 30ರೂ. ಹಾಗೂ 1000 ಚದರಡಿಯಿಂದ ಗರಿಷ್ಠ 5000 ಚದರಡಿವರೆಗಿನ ನಿವಾಸಿ ಕಟ್ಟಡಗಳಿಗೆ ಆಯಾ ಕಟ್ಟಡ ವಿಸ್ತೀರ್ಣಕ್ಕೆ ಅನುಗುಣವಾಗಿ 200ರೂ.ವರೆಗೆ ಮಾಸಿಕ ಘನತ್ಯಾಜ್ಯ ಉಪಕರ ನಿಗದಿಪಡಿಸಲಾಗಿದೆ.
ಅದೇ ರೀತಿ ಕೈಗಾರಿಕಾ ಕಟ್ಟಡಗಳಿಗೆ 1000 ಚದರಡಿವರೆಗೆ 100ರೂ., ಅದಕ್ಕೆ ಮೇಲ್ಪಟ್ಟು 5000 ಚದರಡಿವರೆಗೆ ಗರಿಷ್ಠ 300ರೂ. ವರೆಗೆ ಮಾಸಿಕ ತ್ಯಾಜ್ಯ ಉಪಕರ ವಿಧಿಸಲಾಗುತ್ತದೆ.ಜತೆಗೆ ಹೊಟೇಲ್, ಮಾಲ್, ಕಲ್ಯಾಣಮಂಟಪ ಸೇರಿದಂತೆ ಬೃಹತ್ ತ್ಯಾಜ್ಯ ಉತ್ಪಾದಕ ಸಂಸ್ಥೆಗಳಿಗೆ ಆರಂಭಿಕ 10,000 ಚದರಡಿವರೆಗೆ 300ರೂ. ನಿಂದ ಗರಿಷ್ಠ 50,000ಚದರಡಿವರೆಗಿನ ಕಟ್ಟಡಗಳಿಗೆ 600ರೂ.ವರೆಗೆ ತ್ಯಾಜ್ಯ ನಿರ್ವ ಹಣಾ ಉಪಕರ ನಿಗದಿಪಡಿಸಲಾಗಿದೆ.
ಬೀದಿಬದಿ ವ್ಯಾಪಾರಿಗಳಿಗೂ ಕರ: ಬೀದಿಬದಿ ವ್ಯಾಪಾರಿಗಳು ಕೂಡ ತಿಂಗಳಿಗೆ ಗರಿಷ್ಠ 50ರೂ. ಪಾವತಿ ಮಾಡಬೇಕಾಗುತ್ತದೆ. ನಗರದ ಎಲ್ಲ ರೀತಿಯ ಖಾಲಿ ನಿವೇಶನಗಳಿಗೂ ಪ್ರತಿ ಚದರಡಿಗೆ ತಿಂಗಳಿಗೆ 20ಪೈಸೆಯಂತೆ ತ್ಯಾಜ್ಯ ನಿರ್ವಹಣಾ ಉಪಕರ ಹಾಕಲಾಗುತ್ತದೆ.
ಸಣ್ಣ ಪ್ರಮಾಣದ ವಾಣಿಜ್ಯ ಉದ್ಯಮಗಳ ಪೈಕಿ 50 ಆಸನ ಹೊಂದಿರುವ ಹೊಟೇಲ್, ರೆಸ್ಟೋರೆಂಟ್, ಡಾಬಾಗಳಿಗೆ ಮಾಸಿಕ 500ರೂ., ಅದಕ್ಕಿಂತ ಹೆಚ್ಚಿನ ಆಸನ ಇದ್ದರೆ 750ರೂ., ಮೆಸ್, ಮೊಬೈಲ್ ಕ್ಯಾಂಟಿನ್‍ಗಳಿಗೆ 250ರೂ., ಕಾಫಿ-ಟೀ ಬೇಕರಿಗಳಿಗೆ 100ರೂ., ಫಾಸ್ಟ್‍ಫುಡ್ ಮಳಿಗೆಗಳಿಗೆ 200ರೂ., ಮದುವೆ, ಸಭೆ-ಸಮಾರಂಭ, ಸಮುದಾಯ ಭವನಗಳಿಗೆ ಮಾಸಿಕ 1000ರೂ., ಹಾಸ್ಟೆಲ್, ಲಾಡ್ಜ್, ಪಬ್, ಬಾರ್, ರೆಸ್ಟೋರೆಂಟ್‍ಗಳಿಗೆ 750ರೂ. ಮತ್ತು ಎಲ್ಲ ರೀತಿಯ ಮಾಂಸ ವ್ಯಾಪಾರಿ ಮಳಿಗೆಗಳಿಗೆ 500ರೂ., ಟೆಕ್ಸ್‍ಟೈಲ್ ಗಾರ್ಮೆಂಟ್ಸ್‍ಗಳಿಗೆ 150ರೂ., 50 ಹಾಸಿಗೆವರೆಗಿನ ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ 400ರೂ., ಅದಕ್ಕಿಂತ ಹೆಚ್ಚಿದ್ದರೆ 800ರೂ., ಕ್ಲಿನಿಕ್‍ಗಳಿಗೆ 250ರೂ., ಮೆಡಿಕಲ್ ಸ್ಟೋರ್‍ಗಳಿಗೆ 500ರೂ., ಹಾರ್ಡ್‍ವೇರ್ ಶಾಪ್‍ಗಳಿಗೆ 100ರೂ., ಚಿತ್ರಮಂದಿರಗಳಿಗೆ 200ರೂ., ವಾಹನಗಳ ಶೋರೂಂಗಳಿಗೆ 1000ರೂ., ವಾಹನ ಸರ್ವೀಸ್ ಕೇಂದ್ರಗಳಿಗೆ 500ರೂ. ಮಾಸಿಕ ಕರ ವಿಧಿಸಲಾಗುತ್ತದೆ.
ಇದಲ್ಲದೆ, ಹೂವು, ಹಣ್ಣು, ತರಕಾರಿ ಸೇರಿದಂತೆ ವಿವಿಧ ರೀತಿಯ ವ್ಯಾಪಾರಿ ಮಳಿಗೆಗಳಿಗೂ ಪ್ರತ್ಯೇಕ ದರ ನಿಗದಿಮಾಡಲಾಗಿದೆ.
ಯಾವ ಯಾವ ತಪ್ಪಿಗೆ ಎಷ್ಟು ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗುಳುವುದು, ಮಲಮೂತ್ರ ವಿಸರ್ಜನೆಗೆ 500 ರಿಂದ 1000ರೂ., ತ್ಯಾಜ್ಯ ವಿಂಗಡಿಸಿ ನೀಡದಿದ್ದರೆ 500 ರಿಂದ 1000ರೂ., ತ್ಯಾಜ್ಯ ವಿಂಗಡಿಸದೆ ನೀಡುವ ಸಣ್ಣ ವಾಣಿಜ್ಯ ಮಳಿಗೆಗಳಿಗೆ 1000ರೂ. ನಿಂದ 2500ರೂ., ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಕಸ ವಿಂಗಡಿಸದೆ ನೀಡಿದರೆ 2000 ರಿಂದ 5000ರೂ., ಕಟ್ಟಡ ತ್ಯಾಜ್ಯ ಬೇರ್ಪಡಿಸದೆ ಎಲ್ಲೆಂದರಲ್ಲಿ ಸುರಿದರೆ ಪ್ರತಿ ಟನ್‍ಗೆ 5000 ದಿಂದ 10,000ರೂ., ತ್ಯಾಜ್ಯ ಸುಡುವುದು, ಅನಧಿಕೃತ ವಿಲೇವಾರಿ ಮುಚ್ಚುವುದು 25,000ರೂ., ಮಾಂಸದಂಗಡಿ, ಕಸಾಯಿಖಾನೆ ತ್ಯಾಜ್ಯ ವಿಂಗಡಿಸಿ ನೀಡದಿದ್ದರೆ 1000 ದಿಂದ 2000ರೂ. ದಂಡ ವಿಧಿಸಲಾಗುತ್ತದೆ.
ನಗರವನ್ನು ಸುಂದರವಾಗಿಸಲು ಬೇಕಾದ ಎಲ್ಲ ಅಗತ್ಯ ಅಂಶಗಳನ್ನೂ ಅಳವಡಿಸಿ ಈ ಘನತ್ಯಾಜ್ಯ ನಿರ್ವಹಣಾ ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಈ ನೀತಿ ಜಾರಿಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.