ವಿವಿಧ ಗ್ರಾಮಗಳಲ್ಲಿ ಪ್ರವಾಹ ಹಿನ್ನಲೆ-ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದ ಎಚ್.ಕೆ.ಪಾಟೀಲ್

ಬೆಂಗಳೂರು, ಆ.4-ಕೃಷ್ಣ ಕೊಳ್ಳದ ವಿವಿಧ ಪ್ರದೇಶಗಳಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಸ್ಥಳಾಂತರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಾಸಕ ಎಚ್.ಕೆ.ಪಾಟೀಲ್ ಪತ್ರ ಬರೆದು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿ ಹಾಗೂ ಮುಂಬೈ ಕರ್ನಾಟಕದ ಕೃಷ್ಣ ಹಾಗೂ ಉಪ ನದಿಗಳು ಹರಿಯುತ್ತಿದ್ದು , ನದಿ ತೀರಗಳ ಹಲವು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು , ಸುಮಾರು 40ಕ್ಕೂ ಹೆಚ್ಚು ಗ್ರಾಮಗಳು ಭಾಗಶಃ ಬಾಧಿತವಾಗಿದೆ. ರೈತರು ಬೆಳೆದ ಬೆಳೆಗಳು ಕೂಡ ಹಾಳಾಗಿವೆ.

ಮುಧೋಳ ತಾಲ್ಲೂಕಿನ ಘಟಪ್ರಭಾ ನದಿ ತೀರದ ಧವಳೇಶ್ವರ ನಂದಗಾವ್ ಹಾಗೂ ಮಿರ್ಜಿ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು , ಸಂಚಾರ ಸ್ಥಗಿತಗೊಂಡಿದೆ. ಇದಲ್ಲದೆ ಜಮಖಂಡಿ ತಾಲ್ಲೂಕಿನ ಮುತ್ತೂರು ಕನಕವಾಡಿ ಕೂಡ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದೆ.

ರಾಯಚೂರು ಜಿಲ್ಲೆ ಲಿಂಗಸಗೂರು , ಹೂವಿನ ಹಡಗಲಿ ಸೇರಿದಂತೆ ಹಲವೆಡೆ ಜನರು ಆತಂಕಗೊಂಡಿದ್ದಾರೆ. ಇಲ್ಲಿನ ಐತಿಹಾಸಿಕ ದೇವಾಲಯಗಳು ಕೂಡ ಜಲಾವೃತಗೊಂಡಿದ್ದು , ತುರ್ತು ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಇದು ಕಳವಳಕಾರಿ ಪರಿಸ್ಥಿತಿ ಹಿನ್ನೆಲೆಯಲ್ಲಿ ದೆಹಲಿಗೆ ತಾವು ಕೈಗೊಳ್ಳುವ ಪ್ರವಾಸವನ್ನು ರದ್ದುಗೊಳಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.

ಕೂಡಲೇ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆದು ಅಗತ್ಯ ತುರ್ತು ಕ್ರಮ ಹಾಗೂ ಪರಿಹಾರಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ