ಮೈತ್ರಿ ಸರ್ಕಾರದ ಪತನಕ್ಕೆ ಮೈತ್ರಿ ಪಕ್ಷಗಳ ನಾಯಕರೇ ಹೊಣೆ-ಎಚ್.ವಿಶ್ವನಾಥ್

ಮೈಸೂರು, ಆ.4- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಪಾಲುದಾರಿಕೆ ಪಕ್ಷಗಳ ನಾಯಕರೇ ನೇರ ಹೊಣೆ ಹೊರತು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾವು ಕಾರಣವಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಪಾಲುದಾರಿಕೆ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಾಯಕರ ನಡುವೆ ಆಂತರಿಕ ಸಮನ್ವಯದ ಕೊರತೆ ಜತೆಗೆ ಪರಸ್ಪರ ಸಂಶಯದಿಂದ ನೋಡುತ್ತಿದ್ದರು. ಅಲ್ಲದೆ, ಸಮ್ಮಿಶ್ರ ಸರ್ಕಾರ ಮಾಲೀಕರಾಗಿದ್ದರೇ ಹೊರತು ನಾಯಕರಾಗಿರಲಿಲ್ಲ ಎಂದು ಟೀಕಿಸಿದರು.

ಮೈತ್ರಿ ಸರ್ಕಾರ ಪತನಕ್ಕೆ ರಾಜೀನಾಮೆ ನೀಡಿರುವ ಶಾಸಕರಾಗಲಿ, ಬಿಜೆಪಿಯಾಗಲಿ ಕಾರಣವಲ್ಲ. ನಾವು ಹಣದ ಆಸೆಗಾಗಿ ರಾಜೀನಾಮೆ ನೀಡಲಿಲ್ಲ. ಸರ್ಕಾರದ ಪಾಲುದಾರಿಕೆ ಪಕ್ಷಗಳ ನಾಯಕರು, ಶಾಸಕರನ್ನು ಕಡೆಗಣಿಸಿದ್ದು, ಅಪಮಾನ ಮಾಡಿದ್ದು, ಗೌರವ ಕೊಡದಿದ್ದರಿಂದ ಬೇಸತ್ತು ರಾಜೀನಾಮೆ ನೀಡಬೇಕಾಯಿತು ಎಂದು ಸಮರ್ಥಿಸಿಕೊಂಡರು.

ಸರ್ಕಾರ ಪತನವಾಗುವ ಪರಿಸ್ಥಿತಿಗೆ ಎರಡೂ ಪಕ್ಷಗಳ ನಾಯಕರೇ ನೇರ ಹೊಣೆ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪರಿಸ್ಥಿತಿಯ ಶಿಶುವಾಗಿದ್ದರು.ಅವರು ಲಗಾಮಿಗೆ ಸಿಕ್ಕಿಹಾಕಿಕೊಂಡಿದ್ದರು. ಆ ಲಗಾಮು ಕಿತ್ತುಬಿದ್ದ ಪರಿಣಾಮ ಸರ್ಕಾರದ ರಥ ಉರುಳಿಬಿದ್ದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಲವು ಅಭಿಮಾನಿಗಳಿಗೆ ಕುಮಾರಸ್ವಾಮಿ ಅವರಲ್ಲಿ ವಿಶ್ವಾಸವಿರಲಿಲ್ಲ. ಅಲ್ಲದೆ, ಹಲವು ಬಾರಿ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ನಡೆ ಸರಿಯಿಲ್ಲ ಎಂದು ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದರು. ಹೀಗಾಗಿ ಸರ್ಕಾರದ ಬಗ್ಗೆ ಶಾಸಕರಲ್ಲಿ ತೀವ್ರ ಅಸಮಾಧಾನವಿತ್ತು.ಇವೆಲ್ಲವೂ ಕ್ರೋಢೀಕರಣವಾಗಿ ಮೈತ್ರಿ ಸರ್ಕಾರ ಪತನವಾಯಿತು ಎಂದರು.

ನಾವು ಯಾರೂ ಅತೃಪ್ತರಲ್ಲ. ಅವರೇ ಅತೃಪ್ತರು.ಪದವಿಗಾಗಿ ನಾವು ಪದವಿಯನ್ನು ತ್ಯಾಗ ಮಾಡಿದವರಲ್ಲ ಎಂದು ಸಮರ್ಥಿಸಿಕೊಂಡರು.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ, ಎಂ.ಟಿ.ಬಿ.ನಾಗರಾಜ್ ಇವರೆಲ್ಲರೂ ಕೋಟ್ಯಾಧಿಪತಿಗಳಾಗಿದ್ದು, ಹಣದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೂವರು ಸಚಿವರು ಸೇರಿದಂತೆ 20 ಮಂದಿ ಶಾಸಕರು ರಾಜೀನಾಮೆ ನೀಡಿ ಹೊರನಡೆಯಲು ಸಮ್ಮಿಶ್ರ ಸರ್ಕಾರದ ಆಡಳಿತ ಸರಿಯಿರಲಿಲ್ಲ ಎಂಬುದಕ್ಕೆ ನಿದರ್ಶನ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸದ್ಯಕ್ಕೆ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಳ್ಳಬೇಕಾಯಿತು. ಇದಕ್ಕಾಗಿ ಸಾರ್ವಜನಿಕರಲ್ಲಿ ಹಾಗೂ ತಮ್ಮ ಕ್ಷೇತ್ರದ ಜನರಲ್ಲಿ ಕ್ಷಮೆ ಕೋರುವುದಾಗಿ ಹೇಳಿದರು.

ಸವಾಲು: ತಮ್ಮ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಹಣ ಪಡೆದ ಆರೋಪ ಮಾಡಿರುವ ಮಾಜಿ ಸಚಿವ ಸಾ.ರಾ.ಮಹೇಶ್ ತಾಕತ್ತಿದ್ದರೆ ಸದನದ ಹೊರಗೆ ಆರೋಪ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಸದನದ ಒಳಗೆ ಮಾಡಿದ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲು ಆಗುವುದಿಲ್ಲ. ಅವರಿಗೆ ಧೈರ್ಯವಿದ್ದರೆ ಹೊರಗಡೆ ತಮ್ಮ ವಿರುದ್ಧ ಹಣ ಪಡೆದ ಆರೋಪ ಮಾಡಲಿ ಎಂದು ಸವಾಲು ಹಾಕಿದರು. ಅವರೇ ಹಣ ಪಡೆಯುವಂತಹ ವ್ಯವಹಾರ ಮಾಡಿರಬೇಕು ಎಂದು ಟೀಕಿಸಿದರು.

ಗೌಡರ ಬಗ್ಗೆ ಅಭಿಮಾನ: ರಾಜಕೀಯವಾಗಿ ಮರುಹುಟ್ಟು ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಬಹಳ ಅಭಿಮಾನವಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೌಡರು ಸೋಲಲು ಉಪಮುಖ್ಯಮಂತ್ರಿಯಾಗಿದ್ದವರು ಸೇರಿದಂತೆ ಇನ್ನೂ ಕೆಲವರು ಸೇರಿ ಖೆಡ್ಡಾ ತೋಡಿದರು ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಗೆ ಹಿಂದೆಂದೂ ಇಲ್ಲದ ಅತಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದರ ಬಗ್ಗೆ ವಿಶ್ವನಾಥ್ ಆಶ್ಚರ್ಯ ವ್ಯಕ್ತಪಡಿಸಿದರು.

ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 17 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಅವರು ಅನರ್ಹಗೊಂಡು ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಕಾನೂನು ಹೋರಾಟದಲ್ಲಿ ಸಫಲರಾಗಿ ಉಪಚುನಾವಣೆಯಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ ಸರ್ಕಾರದ ಬಹುಮತಕ್ಕೆ ಮತ್ತೆ ಕಂಟಕವಾಗುವ ಸಾಧ್ಯತೆ ಇದೆ. ಮತ್ತೆ ಎದುರಾಗಬಹುದಾದ ಮಧ್ಯಂತರ ಚುನಾವಣೆ ತಪ್ಪಿಸಿಕೊಳ್ಳಲೋಸುಗ ಜೆಡಿಎಸ್‍ನ 23ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿಗೆ ಸೆಳೆಯುವ ತಂತ್ರ ಹೆಣೆಯಲಾಗಿದ್ದು, ಈ ಕುರಿತು ಮಾತುಕತೆಯನ್ನೂ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಬಿಜೆಪಿ ಹಲವು ರಾಜ್ಯಗಳಲ್ಲಿ ಈ ಪ್ರಯೋಗ ಮಾಡಿ ಬೇರೆ ಪಕ್ಷಗಳಿಂದ ಶಾಸಕರನ್ನು ಸಾರಾಸಗಟಾಗಿ ತಮ್ಮತ್ತ ಸೆಳೆದು ಪಕ್ಷವನ್ನು ಅಧಿಕಾರದಲ್ಲಿ ಸ್ಥಾಪಿಸಿದೆ. ಕರ್ನಾಟಕದಲ್ಲೂ ಇದೇ ಪ್ರಯೋಗ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ