ದೇವೇಗೌಡರ​ ಕುಟುಂಬ ರಾಜಕಾರಣ ಮತ್ತೆ ಶುರು?

ಹಾಸನ: ಜೆಡಿಎಸ್ಮೇಲೆ ಮೊದಲಿನಿಂದಲೂ ಕುಟುಂಬ ರಾಜಕಾರಣದ ಆರೋಪವಿದೆ. ನಾನು ಕುಟುಂಬ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳುತ್ತಲೇ   ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್​.ಡಿ. ದೇವೇಗೌಡರು ತಮ್ಮ ಜೊತೆಗೆ ಇಬ್ಬರು ಮೊಮ್ಮಕ್ಕಳನ್ನೂ ಕಣಕ್ಕಿಳಿಸಿದ್ದರು. ಕಾರಣದಿಂದಲೇ ಇಡೀ ದೇಶವೇ ಹಾಸನ, ತುಮಕೂರು, ಮಂಡ್ಯ ಜಿಲ್ಲೆಯತ್ತ ದೃಷ್ಟಿ ನೆಟ್ಟಿತ್ತು.

ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳಿಗೆ ಸದ್ಯದಲ್ಲೇ ಉಪಚುನಾವಣೆ ನಡೆಯಲಿದ್ದು, ಇಲ್ಲಿ ಮತ್ತೆ ತನ್ನ ಆಟವನ್ನು ತೋರಿಸಲು ಜೆಡಿಎಸ್​ ತಂತ್ರ ರೂಪಿಸುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ತಮ್ಮ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತಾವು ತುಮಕೂರಿನಿಂದ ಸ್ಪರ್ಧಿಸಿದ್ದರು. ಆದರೆ, ದೇವೇಗೌಡರಿಗೆ ತುಮಕೂರಿನ ಜನತೆ ಸೋಲಿನ ರುಚಿ ತೋರಿಸಿದ್ದರು. ಇತ್ತ ಹಾಸನದಲ್ಲಿ ಪ್ರಜ್ವಲ್ ಗೆಲುವಿನ ನಗೆ ಬೀರಿದ್ದರು.

ಫಲಿತಾಂಶ ಪ್ರಕಟವಾದ ಬಳಿಕ ಪ್ರಜ್ವಲ್ ರೇವಣ್ಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಹಾಸನದಿಂದ ತಾತ ದೇವೇಗೌಡರೇ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಲಿ ಎಂದು ಅವರು ತಮ್ಮ ಮನದಿಂಗಿತವನ್ನು ಹೇಳಿಕೊಂಡಿದ್ದರು. ಆದರೆ, ಅದಕ್ಕೆ ದೇವೇಗೌಡರು ಒಪ್ಪಿರಲಿಲ್ಲ. ಇದೀಗ ಮತ್ತೆ ದೇವೇಗೌಡರನ್ನು ಸಂಸತ್​ಗೆ ಕಳುಹಿಸಲು ಜೆಡಿಎಸ್​ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾಗಿರುವ ಜೆಡಿಎಸ್​ ಈ ಬಾರಿಯ ವಿಧಾನಸಭಾ ಉಪ ಚುನಾವಣೆಯನ್ನು ಬಳಸಿಕೊಂಡು ದೇವೇಗೌಡರನ್ನು ಸಂಸತ್​ಗೆ ಕಳುಹಿಸಿ, ಜೆಡಿಎಸ್​ನಿಂದ ಉಚ್ಛಾಟಿತರಾಗಿರುವ ಅನರ್ಹ ಶಾಸಕ ಹೆಚ್​. ವಿಶ್ವನಾಥ್​ ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಲು ಮಹಾಪ್ಲಾನ್​ ಮಾಡಿದೆ. ವಿಧಾನಸಭೆಗೂ ದೇವೇಗೌಡರು ಸಂಸತ್​ಗೆ ಆಯ್ಕೆಯಾಗಲು ಏನು ಸಂಬಂಧ? ಎಂದು ನೀವು ಯೋಚಿಸುತ್ತಿರಬಹುದು. ಅಲ್ಲೇ ಇರುವುದು ಜೆಡಿಎಸ್​ನ ಲೆಕ್ಕಾಚಾರ!

ಈ ಬಾರಿಯ ವಿಧಾನಸಭಾ ಉಪ ಚುನಾವಣೆಯಲ್ಲಿ ಹುಣಸೂರಿನಿಂದ ಪ್ರಜ್ವಲ್ ರೇವಣ್ಣನನ್ನು ಕಣಕ್ಕಿಳಿಸಲು ಜೆಡಿಎಸ್​ ಚಿಂತನೆ ನಡೆಸಿದೆ. ಆಗ ಪ್ರಜ್ವಲ್​​ ರಾಜೀನಾಮೆಯಿಂದ ತೆರವಾದ ಹಾಸನ ಲೋಕಸಭಾ ಕ್ಷೇತ್ರಕ್ಕೆ ಮರುಮತದಾನವಾಗಲಿದೆ. ಅಲ್ಲಿಂದ ದೇವೇಗೌಡರು ಸ್ಪರ್ಧಿಸಿ ಗೆದ್ದರೆ ಅತ್ತ ದೇವೇಗೌಡರು ಸಂಸತ್​ ಪ್ರವೇಶಿಸಿದಂತೆಯೂ ಆಗುತ್ತದೆ. ಇತ್ತ ಹುಣಸೂರು ಕ್ಷೇತ್ರದ ಮೂಲಕ ಪ್ರಜ್ವಲ್ ಸಕ್ರಿಯ ರಾಜಕಾರಣದಲ್ಲಿ ಉಳಿದಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರದ ಮೂಲಕ ಜೆಡಿಎಸ್​ ನಾಯಕರು ತಂತ್ರ ರೂಪಿಸತೊಡಗಿದ್ದಾರೆ. ಇದೇನಾದರೂ ನಿಜವಾದರೆ ಮತ್ತೆ ಜೆಡಿಎಸ್​ ಕುಟುಂಬ ರಾಜಕಾರಣಕ್ಕೆ ಜೀವ ಬಂದಂತಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ